ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಉದ್ಘಾಟನೆ
ಕಾಪು.ಜೂ,4 : ವೈಜ್ಞಾನಿಕ ಮಾರ್ಪಡಿನ ಮೂಲಕ ರಾಜ್ಯ ಸರಕಾರ ಕೃಷಿಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ರೂಪಿಸಿದೆ. ಯಾಂತ್ರೀಕೃತ ಕೃಷಿಯಿಂದ ಲಾಭಗಳಿಸಲು ರೈತರು ಮುಂದಾಗಬೇಕು ಎಂದು ಶಾಸಕ ವಿನಯಕುಮಾರ್ ಸೊರಕೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು ಸಹಯೋಗದಲ್ಲಿ ಕಾಪು ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾಪು ಹೋಬಳಿ ಮಟ್ಟದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ರೈತ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ 80 ಶೇಕಡಾ ಜನ ಕೃಷಿ ಅವಲಂಬಿತರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೃಷಿ ಪ್ರಥಮ ಶ್ರೇಣಿಯಲ್ಲಿದೆ. ಆದರೆ ಕೃಷಿಯಲ್ಲಿ ಆದಾಯವಿಲ್ಲದೆ ರೈತ ಆತ್ಮಹತ್ಯೆ ಮಾಡುವ ಪರಿಸ್ಥಿತಿ ಎದುರಾಗಿದೆ. ಕೃಷಿ ಉತ್ತೇಜಿಸುವ ಸಲುವಾಗಿ ಭೂ ಮಸೂದೆ ಜಾರಿಯಾಯಿತಾದರೂ, ಇಂದು ಕೃಷಿ ಭೂಮಿ ಸೈಟ್‌ಗಳಾಗಿ ಮಾರಾಟವಾಗುತ್ತಿರುವುದು ಬೇಸರದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
ಕಾಪು ಕ್ಷೇತ್ರದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಯಿಂದ ಕೃಷಿಕರು ಸ್ಥಾನಪಲ್ಲಟವಾಗಿದ್ದಾರೆ. ಕೃಷಿಯಿಲ್ಲದೆ ಅಂತರ್ಜಲ ಮಟ್ಟಕ್ಕೂ ತೊಂದರೆಯಾಗಿದೆ. ರಾಜ್ಯ ಸರಕಾರ ಬಜೆಟ್‌ನಲ್ಲಿ ಪಶ್ಚಿಮವಾಹಿನಿ ಯೋಜನೆಗೆ ಅನುದಾನ ಮೀಸಲಿರಿಸಿದ್ದು, ಸರಣಿ ಕಿಂಡಿ ಅಣೆಕಟ್ಟುಗಳ ಮೂಲಕ ನೀರಿನ ಮಟ್ಟ ಏರಿಕೆಗೆ ಒತ್ತು ನೀಡಿದೆ. ಕಾಪು ಕ್ಷೇತ್ರದ 25 ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಅರಣ್ಯ ಇಲಾಖೆಯಿಂದ ಗಿಡ ನೆಡುವ ಮೂಲಕ ಹಸಿರೀಕರಣಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದು ಶಾಸಕರು ಹೇಳಿದರು.
ಆರು ಜನ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ಕಾಪು ಹೋಬಳಿ ಮಟ್ಟದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ಕಾಪು ಮಹಿಳಾ ಸಂಘದ ಕಟ್ಟಡದಲ್ಲಿ ಕಾರ್ಯಚರಿಸಲಿದೆ. ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಶಿಲ್ಪಾ ಸುವರ್ಣ, ವಿಲ್ಸನ್ ಹೆರಾಲ್ಡ್ ರಾಡ್ರಿಗಸ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯರಾದ ದಿನೇಶ್ ಕೋಟ್ಯಾನ್, ಯು.ಸಿ. ಶೇಖಬ್ಬ, ಗೀತಾ ವಾಗ್ಲೆ, ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಪುರಸಭೆ ವಿರೋಧಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು, ಮುಖ್ಯಾಧಿಕಾರಿ ರಾಯಪ್ಪ, ಸಹಾಯಕ ಕೃಷಿ ನಿರ್ದೇಶಕ ಮೋಹನರಾಜ್, ಶೈಲಜಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯಕ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಶಂಕರ್ ಇದ್ದರು.