×
Ad

ಸಮುದ್ರದಲ್ಲಿ ಸಿಲುಕಿದ್ದ 27 ಕಾರ್ಮಿಕರ ರಕ್ಷಣೆ

Update: 2017-06-04 17:47 IST
ಮಂಗಳೂರು, ಜೂ. 4: ಉಳ್ಳಾಲ ಕಡಲತೀರದಿಂದ ಸುಮಾರು 1.6 ಕಿ.ಮೀ. ದೂರದಲ್ಲಿ ಸಮುದ್ರ ಕೊರೆತದ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾಗ ಶನಿವಾರ ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ದುರಂತಕ್ಕೀಡಾಗಿದ್ದ ಬಾರ್ಜ್‌ನಲ್ಲಿದ್ದ ಎಲ್ಲ 27 ಮಂದಿ ಕಾರ್ಮಿಕರನ್ನು ಕರಾವಳಿ ತಟರಕ್ಷಣಾ ಪಡೆ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆ ರವಿವಾರ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಶನಿವಾರ ಮಧ್ಯಾಹ್ನ 1:30ಕ್ಕೆ ಬಾರ್ಜ್ ಅವಘಡಕ್ಕೀಡಾಗಿ ತಡೆಗೋಡೆಗೆ ಹಾಕಿದ ಬಂಡೆ ಕಲ್ಲುಗಳಿಗೆ ವಾಲಿ ನಿಂತಿತ್ತು. ವಿಷಯ ತಿಳಿದ ಜಿಲ್ಲಾಡಳಿತ ಸಂಜೆ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಅದರಂತೆ ರಾತ್ರಿ 8:15ರ ವೇಳೆಗೆ 4 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಹವಾಮಾನ ವೈಪರೀತ್ಯ ಮತ್ತು ಬೋಟ್‌ನಲ್ಲಾದ ತಾಂತ್ರಿಕ ಕಾರಣದಿಂದ ಕೋಸ್ಟ್‌ಗಾರ್ಡ್ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ರವಿವಾರ ಮುಂಜಾನೆ 5:30ಕ್ಕೆ ಕೋಸ್ಟ್‌ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿತು. ಪ್ರಾರಂಭದಲ್ಲಿ ಕೋಸ್ಟ್‌ಗಾರ್ಡ್‌ನ ಅಮಾರ್ತ್ಯ ನೌಕೆಯಿಂದ ಬಾರ್ಜ್‌ನತ್ತ ಡೆಂಗಿ ಕಳುಹಿಸಿ ಕಾರ್ಯಾಚರಣೆ ನಡೆಸಿತು. ಸುಮಾರು 8 ಗಂಟೆಗೆ 15 ಮಂದಿಯನ್ನು ರಕ್ಷಿಸಲಾಯಿತು. ಬಳಿಕ ಗಂಗೀರೆಡ್ಡಿ ನೇತೃತ್ವದ ಕರಾವಳಿ ಕಾವಲು ಪೊಲೀಸ್ ಪಡೆಯ ನೇತ್ರಾವತಿ ಇಂಟರ್‌ಸೆಪ್ಟರ್ ದೋಣಿ (12ಟನ್ ಕೆಡಬ್ಲ್ಯುಆರ್036) ಬೋಟ್ ತೆರಳಿ ಉಳಿದ 8 ಮಂದಿಯನ್ನು ರಕ್ಷಣೆ ಮಾಡಿತು. 9 ಗಂಟೆಯ ವೇಳೆಗೆ ಎಲ್ಲ ಕಾರ್ಮಿಕರ ರಕ್ಷಣೆ ಮಾಡಿ, ತೀರದತ್ತ ಕರೆದುಕೊಂಡು ಬರಲಾಯಿತು. ಆಂಧ್ರಪ್ರದೇಶ ಮೂಲದ ಧರ್ತಿ ಕಂಪೆನಿ ಸಮುದ್ರ ಕೊರತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಮೇ 31ಕ್ಕೆ ಕಾಮಗಾರಿ ಸ್ಥಗಿತಗೊಳಿಸಿ ತೆರಳಬೇಕಿತ್ತು. ಆದರೆ ಬಾರ್ಜ್ ಮುಂಬೈ ತೆರಳಲಿದ್ದ ಕಾರಣ ಅಲ್ಲೇ ಉಳಿದಿತ್ತು. ಶನಿವಾರ ಬೀಸಿದ ಭಾರಿ ಗಾಳಿ, ಅಲೆಗಳ ತಾಂತ್ರಿಕ ತೊಂದರೆ ಅನುಭವಿಸಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ, ಗೃಹರಕ್ಷಕ ದಳ ಸಿಬ್ಬಂದಿ, ಪೊಲೀಸರು ಮತ್ತು ಕೆಎಸ್ಸಾರ್ಪಿ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಉಳ್ಳಾಲ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News