ಪ್ರಕರಣದ ಸಮಗ್ರ ವರದಿ ನೀಡಲು ಜಿಲ್ಲಾಡಳಿತಕ್ಕೆ ಸಚಿವ ಯು.ಟಿ. ಖಾದರ್ ಸೂಚನೆ
Update: 2017-06-04 17:59 IST
ಮಂಗಳೂರು, ಜೂ.4: ಉಳ್ಳಾಲ ಕಡಲ ತೀರದಿಂದ ಸುಮಾರು 1.6 ಕಿ.ಮೀ ದೂರದಲ್ಲಿ ಶನಿವಾರ ಅಪರಾಹ್ನ ಸಂಭವಿಸಿದ ‘ಬಾರ್ಜ್ ದುರಂತ’ಕ್ಕೆ ಸಂಬಂಧಿಸಿ ತನಿಖೆ ನಡೆಸಿ ಸಮಗ್ರ ವರದಿ ನೀಡಬೇಕು ಎಂದು ಸಚಿವ ಯು.ಟಿ.ಖಾದರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಪಣಂಬೂರಿನಲ್ಲಿರುವ ಕೋಸ್ಟ್ ಗಾರ್ಡ್‌ನ ಜಿಲ್ಲಾ ಮುಖ್ಯ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶನಿವಾರ ಅಪರಾಹ್ನ 1:30ಕ್ಕೆ ದುರಂತ ಸಂಭವಿಸಿದ್ದರೂ ಸಂಬಂಧಪಟ್ಟ ಕಂಪೆನಿಯವರು ಕೋಸ್ಟ್‌ಗಾರ್ಡ್‌ಗೆ 4:45ಕ್ಕೆ ಮಾಹಿತಿ ನೀಡಲಾಗಿದೆ. ಈ ಮಧ್ಯೆ ಕಂಪೆನಿಯವರು ಬಾರ್ಚ್‌ನ್ನು ಬಚಾವ್ ಮಾಡಲು 2 ಬಾರಿ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಇವರಿಗೆ ಕಾರ್ಮಿಕರ ರಕ್ಷಣೆಗಿಂತ ಬಾರ್ಚ್‌ನ ರಕ್ಷಣೆ ಮುಖ್ಯವಾಗಿತ್ತು. ಈ ಲೋಪವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣ ಜಿಲ್ಲಾಡಳಿತ ಮತ್ತು ಬಂದರು ಇಲಾಖೆ ಪ್ರತ್ಯೇಕವಾಗಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಇದನ್ನು ಮುಖ್ಯಮಂತ್ರಿ ಮತ್ತು ಬಂದರು ಇಲಾಖಾ ಸಚಿವರ ಗಮನಕ್ಕೆ ತಂದು ಕಂಪೆನಿಯ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದರು. ಮೀನುಗಾರಿಕೆಗೆ ರಜೆ ಇದ್ದರೂ ಕೂಡ ಕಾರ್ಮಿಕರು ಹೇಗೆ ಕಡಲಿಗೆ ಇಳಿದರು? ಕಂಪೆನಿ ಯಾಕೆ ನಿರ್ಲಕ್ಷ ವಹಿಸಿತು? ಜಿಲ್ಲಾಡಳಿತಕ್ಕೆ ದುರಂತದ ಮಾಹಿತಿ ನೀಡಲು ವಿಳಂಬಿಸಿದ್ದು ಯಾಕೆ? ಇತ್ಯಾದಿಯ ಬಗ್ಗೆ ತನಿಖೆ ನಡೆಯಬೇಕಾಗಿದೆ. ಸ್ಥಳೀಯ ಶಾಸಕನಾಗಿರುವ ತನಗೆ ಸಂಜೆ 5:15ಕ್ಕೆ ಮಾಹಿತಿ ಸಿಕ್ಕಿತು. ಇದೆಲ್ಲಾ ಕಂಪೆನಿಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. ದುರಂತ ನಡೆದ ತಕ್ಷಣ ಕೋಸ್ಟ್‌ಗಾರ್ಡ್, ಕರಾವಳಿ ರಕ್ಷಣಾ ಪಡೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೆ ಶನಿವಾರವೇ ಎಲ್ಲ 27 ಮಂದಿಯನ್ನು ಪಾರು ಮಾಡಬಹುದಾಗಿತ್ತು ಎಂದು ಖಾದರ್ ಅಭಿಪ್ರಾಯಪಟ್ಟರು. ಕಾರವಾರ ಮತ್ತು ಗೋವಾದಿಂದ ನೇವಲ್ ಪಡೆಯನ್ನು ತರಿಸುವ ಯೋಜನೆ ರೂಪಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ತಡೆಗೋಡೆಯ ಕಲ್ಲಿನ ರಾಶಿ ಇದ್ದ ಕಾರಣದಿಂದ ದೊಡ್ಡ ನೌಕೆಗಳನ್ನು ಬಾರ್ಜ್ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ ಎಂದ ಖಾದರ್, ಈ ಘಟನೆ ಜಿಲ್ಲಾಡಳಿತ ಮತ್ತು ಸ್ಥಳೀಯರಿಗೆ ದೊಡ್ಡ ಎಚ್ಚರಿಕೆ ಕರೆಗಂಟೆಯಾಗಿದೆ. ಇನ್ನು ಎರಡು ತಿಂಗಳಿನಲ್ಲಿ ಕಡಲು ತೀರಾ ಅಬ್ಬರವಿರುವುದರಿಂದ ಕಡಲ ತಟದ ಜನರು, ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು ಎಂದರು. ಆರೋಗ್ಯ ತಪಾಸಣೆಗೆ ಕ್ರಮ: ಬಾರ್ಜ್‌ನಿಂದ ರಕ್ಷಿಸಲಾದ 27ಮಂದಿಗೆ ಆರೋಗ್ಯ ತಪಾಸಣೆ ನಡೆಸಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಖಾದರ್, ಕಂಪನಿಯ ಬಗ್ಗೆ ಕಾರ್ಮಿಕರಲ್ಲಿ ಮಾಹಿತಿ ಪಡೆದುಕೊಂಡು ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಪರಿಹರಿಸಲು ಆದೇಶಿಸಿದರು. ಶೋಭಿತ್‌ನ ನಿಲುವು ಪ್ರಶಂಶನೀಯ: ಸ್ಥಳೀಯ ಬೆಂಗರೆ ನಿವಾಸಿಯಾದ ಶೋಭಿತ್ ಪ್ರಾಣಾಪಯದಲ್ಲಿದ್ದರೂ ಕೂಡ ಆತ ಇತರ ಕಾರ್ಮಿಕರಿಗೆ ಮಾನಸಿಕ ಧೈರ್ಯ ನೀಡಿದ್ದ. ಮೀನುಗಾರನಾಗಿದ್ದ ಶೋಭಿತ್ ಮನಸ್ಸು ಮಾಡಿದ್ದರೆ ಶನಿವಾರವೇ ಈಜಿ ದಡ ಸೇರಬಹುದಿತ್ತು. ಆದರೆ ಆತ ಹೊರ ರಾಜ್ಯದ ಕಾರ್ಮಿಕರ ಆತಂಕವನ್ನು ದೂರ ಮಾಡಲು ಪ್ರಯತ್ನಿಸಿ ಬಾರ್ಜ್‌ನಲ್ಲೇ ರಾತ್ರಿ ಕಳೆದ. ಇದು ಜಿಲ್ಲೆಗೆ ಹೆಮ್ಮೆ ತರುವ ವಿಚಾರವಾಗಿದೆ. ಘಟನೆ ನಡೆದ ತಕ್ಷಣ ಆತ ಸ್ಥಳೀಯರು ಮತ್ತು ಜಿಲ್ಲಾಡಳಿತದೊಂದಿಗೆ ಸಂವಹನ ನಡೆಸಿದ್ದ. ಅದರ ಪರಿಣಾಮವಾಗಿ ಅಪಾಯದಲ್ಲಿದ್ದವರು ತಡವಾಗಿಯಾದರೂ ಪಾರಾಗುವಂತಾಯಿತು ಎಂದು ಖಾದರ್ ಪ್ರಶಂಸೆ ವ್ಯಕ್ತಪಡಿಸಿದರು. ಸ್ಥಳ ನೀಡಿದರೆ ಹೆಲಿಕಾಪ್ಟರ್ ಭರವಸೆ: ಕರಾವಳಿಯಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು ತುರ್ತು ಕಾರ್ಯಾಚರಣೆಗೆ ಹೆಲಿಕಾಪ್ಟರ್ ಅನಿವಾರ್ಯತೆ ಇದೆ. ಮಂಗಳೂರು ವಿಮಾನ ನಿಲ್ದಾಣ ಅಥವಾ ಬಂದರು ಪ್ರದೇಶದ ಸುತ್ತಮುತ್ತ ಹೆಲಿಕಾಪ್ಟರ್ ನಿಲುಗಡೆಗೆ ಶಾಶ್ವತ ಅವಕಾಶ ನೀಡಿದರೆ ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್ ನೀಡಲು ಸಿದ್ಧ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಶೀಘ್ರದಲ್ಲೇ ಚರ್ಚೆ ನಡೆಸಿ, ಹೆಲಿಕಾಪ್ಟರ್ ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಖಾದರ್ ನುಡಿದರು. ಸುದ್ದಿಗೋಷ್ಠಿಯಲ್ಲಿ ಕೋಸ್ಟ್‌ಗಾರ್ಡ್ ಡಿಐಜಿ ಎಸ್.ಎಸ್. ದಸೀಲಾ, ಕಮಾಂಡರ್ ಗುಲ್ವಿಂದರ್ ಸಿಂಗ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಪೊಲೀಸ್ ಕಮಿಷನರ್ ಚಂದ್ರಶೇಖರ್, ಶಾಸಕ ಮೊಯ್ದಿನ್ ಬಾವಾ ಮತ್ತಿತರರಿದ್ದರು. ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆ ಸ್ಥಗಿತ: ಎಸ್.ಎಸ್. ದಸೀಲಾ ಶನಿವಾರ ಸಂಜೆ 4:45ಕ್ಕೆ ವಿಷಯ ತಿಳಿದ ತಕ್ಷಣ ಕೋಸ್ಟ್‌ಗಾರ್ಡ್ ಸಿಬ್ಬಂದಿ ವರ್ಗ ಕಾರ್ಯಾಚರಣೆ ಆರಂಭಿಸಿದೆ. ಸಂಜೆ 6:48ರ ವೇಳೆಗೆ 4 ಮಂದಿಯ ರಕ್ಷಣೆಯನ್ನೂ ಮಾಡಲಾಗಿದೆ. ಆದರೆ ವಿಪರೀತ ಗಾಳಿಯ ಒತ್ತಡ, ಅಲೆಗಳ ಅಬ್ಬರ, ತಾಂತ್ರಿಕ ಸಮಸ್ಯೆಯಿಂದ ರಾತ್ರಿ 8:10ಕ್ಕೆ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು ಎಂದು ಕೋಸ್ಟ್‌ಗಾರ್ಡ್ ಡಿಐಜಿ ಎಸ್.ಎಸ್. ದಸೀಲಾ ಹೇಳಿದರು. ಪಣಂಬೂರಿನಲ್ಲಿರುವ ಕೋಸ್ಟ್ ಗಾರ್ಡ್‌ನ ಜಿಲ್ಲಾ ಮುಖ್ಯ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾರ್ಜ್ ಮತ್ತು ಕೋಸ್ಟ್‌ಗಾರ್ಡ್‌ಗೆ ಸೇರಿದ ಅಮಾರ್ತ್ಯ ನೌಕೆಗೆ 900 ಮೀಟರ್ ಅಂತರವಿತ್ತು. ಬಾರ್ಜ್ ವಾಲಿ ನಿಂತ ಕಡೆ ಕಲ್ಲಿನ ರಾಶಿ ಇತ್ತು ಮತ್ತು ಕೇವಲ 4 ಮೀಟರ್ ಆಳವಿದ್ದ ಕಾರಣ ದೊಡ್ಡ ನೌಕೆಗಳನ್ನು ಅದರ ಹತ್ತಿರ ಕೊಂಡೊಯ್ಯಲು ಆಗುತ್ತಿರಲಿಲ್ಲ. ಹವಾಮಾನ ವೈಪರೀತ್ಯವಿದ್ದ ಕಾರಣ ಹೆಲಿಕಾಪ್ಟರ್ ಬಳಕೆಯೂ ಕಷ್ಟವಾಗಿತ್ತು. ಬಾರ್ಜ್‌ನಲ್ಲಿದ್ದವರ ಜತೆ ನಿಕಟ ಸಂಪರ್ಕವಿದ್ದ ಕಾರಣ ಆಹಾರ, ನೀರು, ಲೈಫ್ ಗಾರ್ಡ್ ಸೇರಿದಂತೆ ಕ್ಷಣಕ್ಷಣದ ಮಾಹಿತಿಯನ್ನು ನಾವು ಪಡೆದುಕೊಳ್ಳುತ್ತಿದ್ದೆವು ಎಂದರು. ರವಿವಾರ ಮುಂಜಾನೆ ಸುಮಾರು 5:30ರಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದೆವು. ಕರಾವಳಿ ಕಾವಲು ಪೊಲೀಸರು ಕೂಡಾ ಸಹಕಾರ ನೀಡಿದ ಕಾರಣ 27ಮಂದಿ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಯಿತು ಎಂದರು.