×
Ad

ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಒಳಚರಂಡಿ ಸರಿಪಡಿಸಲು ಮನವಿ

Update: 2017-06-04 18:38 IST
ಮಂಗಳೂರು, ಜೂ.4: ನಗರದ ಹೃದಯ ಭಾಗವಾದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಒಳಚರಂಡಿ ತೀರಾ ಅವ್ಯವಸ್ಥೆಯಿಂದ ಕೂಡಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ನಿಯೋಗ ಮನಪಾಕ್ಕೆ ಮನವಿ ಸಲ್ಲಿಸಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಸಣ್ಣ ಮಳೆ ಬಂದರೂ ಕೃತಕ ನೆರೆ ಸಂಭವಿಸುತ್ತಿತ್ತು. ಇದನ್ನು ಸಿಪಿಎಂ ಪಕ್ಷವು ಮನಪಾದ ಗಮನಕ್ಕೆ ತಂದಿದ್ದರ ಫಲವಾಗಿ ಕಳೆದ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒಳಚರಂಡಿ ವ್ಯವಸ್ಥೆ ಮಾಡಲಾಗಿತ್ತು. ಪ್ರಸ್ತುತ ಇಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಭಾರೀ ತೊಂದರೆಯುಂಟಾಗಿದೆ. ತ್ಯಾಜ್ಯ ನೀರು ಹರಿಯುವ ಈ ಒಳಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಅಲ್ಲೇ ಶೇಖರಣೆಗೊಂಡಿದ್ದು, ಪ್ರದೇಶದಾದ್ಯಂತ ದುರ್ನಾತ ಬೀರುತ್ತದೆ. ತೆರೆದ ಚರಂಡಿಯಿಂದಾಗಿ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ನಡೆದಾಡಲೂ ಕೂಡ ಅಸಾಧ್ಯವಾಗಿದೆ ಎಂದು ತಿಳಿಸಿರುವ ಸಿಪಿಎಂ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಚರಂಡಿಗೆ ಮೇಲ್ಛಾವಣೆ ಹಾಕಬೇಕೆಂದು ಒತ್ತಾಯಿಸಿದೆ. ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ನಗರ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಪ್ರದೀಪ್ ಉರ್ವಸ್ಟೋರ್ ಮತ್ತಿತರರು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News