×
Ad

ಹೈಕೋರ್ಟ್‌ಗಳಿಗೆ 44 ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಕೇಂದ್ರದಿಂದ ಚಾಲನೆ

Update: 2017-06-04 20:50 IST

ಹೊಸದಿಲ್ಲಿ,ಜೂ.4: ಉಚ್ಚ ನ್ಯಾಯಾಲಗಳಿಗೆ 44 ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಸರಕಾರವು ಚಾಲನೆ ನೀಡಿದೆ ಎಂದು ತಿಳಿದು ಬಂದಿದೆ. ಸರಕಾರವು ಈ ಹಿಂದೆ ಎರಡು ಸಂದರ್ಭಗಳಲ್ಲಿ ಈ ನ್ಯಾಯಾಧೀಶರ ಹೆಸರುಗಳನ್ನು ಪುನರ್‌ಪರಿಶೀಲನೆಗಾಗಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಮ್‌ಗೆ ವಾಪಸ್ ಕಳುಹಿಸಿತ್ತು.
29 ಅಭ್ಯರ್ಥಿಗಳು ಅಲಹಾಬಾದ್ ಉಚ್ಚ ನ್ಯಾಯಾಲಯದವರಾಗಿದ್ದರೆ, ಇಬ್ಬರು ಕರ್ನಾಟಕ, ಏಳು ಜನರು ಕಲಕತ್ತಾ ಮತ್ತು ಆರು ಜನರು ಮದ್ರಾಸ ಉಚ್ಚ ನ್ಯಾಯಾಲಯಗಳಿಗೆ ಸೇರಿದವರಾಗಿದ್ದಾರೆ ಎಂದು ಉನ್ನತ ಮೂಲಗಳು ರವಿವಾರ ಇಲ್ಲಿ ತಿಳಿಸಿದವು.

ಸರ್ವೋಚ್ಚ ನ್ಯಾಯಾಲಯದ ಐವರು ಅತ್ಯಂತ ಹಿರಿಯ ನ್ಯಾಯಾಧೀಶರ ಸಮಿತಿಯಾಗಿರುವ ಕೊಲಿಜಿಯಂ ಎ.10ರಂದು ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಕ್ಕೆ ತನ್ನ ಶಿಫಾರಸುಗಳನ್ನು ಎರಡನೇ ಬಾರಿ ಪುನರ್ ದೃಢಪಡಿಸಿತ್ತು.

ಸ್ಥಾಪಿತ ರೂಢಿಯಂತೆ ಸಾಮಾನ್ಯವಾಗಿ ಸರಕಾರವು ಕೊಲಿಜಿಯಂ ಶಿಫಾರಸು ಮಾಡಿದ ವ್ಯಕ್ತಿಯನ್ನು ನ್ಯಾಯಾಧೀಶರನ್ನಾಗಿ ನೆಮಕಗೊಳಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೋದಿ ಸರಕಾರವು ಕೊಲಿಜಿಯಮ್‌ನ ಶಿಫಾರಸುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಮರಳಿಸಿ ತನ್ನ ಅಸಮ್ಮತಿಯನ್ನು ಸೂಚಿಸಿತ್ತು.

ಕಳೆದ ವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ 14 ಮತ್ತು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯಕ್ಕೆ ಮೂವರು ನ್ಯಾಯಾಧೀಶರನ್ನು ನೇಮಕಗೊಳಿಸಲಾಗಿತ್ತು.
ದೇಶದಲ್ಲಿಯ 24 ಉಚ್ಚ ನ್ಯಾಯಾಲಯಗಳಲ್ಲಿ ಒಟ್ಟು 1,079 ನ್ಯಾಯಾಧೀಶರ ಹುದ್ದೆಗಳಿದ್ದು, ಈ ಪೈಕಿ 450 ಹುದ್ದೆಗಳು ಖಾಲಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News