ಮೌಢ್ಯತೆಯೊಂದಿಗಿನ ಅಮಾನವೀಯ ಧಾರ್ಮಿಕ ಆಚರಣೆ ತೊಡದು ಹಾಕಿ: ಡಾ.ಕೇಶವ ಧರಣಿ

Update: 2017-06-04 15:49 GMT
ಮಂಗಳೂರು, ಜೂ.4: ಮೌಢ್ಯತೆಯೊಂದಿಗಿನ ಅಮಾನವೀಯ ಧಾರ್ಮಿಕ ಆಚರಣೆ ತೊಡದು ಹಾಕಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಜಾಗೃತಿ ಮೂಡಿಸಬೇಕಾಗಿದೆ ಎಂದು ಕುದ್ಮುಲ್ ರಂಗರಾವ್ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಡಾ.ಕೇಶವ ಧರಣಿ ತಿಳಿಸಿದರು. ಅವರು ಇಂದು ನಗರದ ಎನ್‌ಜಿಒ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆಯ ಕರ್ನಾಟಕ ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡ ವಿಚಾರ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮಾಢ್ಯತೆಯೊಂದಿಗಿನ ಧಾರ್ಮಿಕ ಆಚರಣೆ ನಿಲ್ಲದೆ ಹೋದರೆ ಸಮಾಜದಲ್ಲಿ ಸಾಕಷ್ಟು ಅಮಾಯಕರು,ಮಹಿಳೆಯರು,ದುರ್ಬಲರು ಬಲಿಯಾಗುತ್ತಾರೆ.ಜೋತಿಷ್ಯದ ಹೆಸರಿನಲ್ಲಿ ಜನರನ್ನು ಮತ್ತಷ್ಟು ಅಜ್ಞಾನದ ಕತ್ತಲೆಯ ಕೂಪಕ್ಕೆ ತಳ್ಳುವ ಕೆಲಸ ನಡೆಯುತ್ತಿದೆ.ಅದಕ್ಕಾಗಿ ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಸಿಕೊಂಡು ಮಾನಸಿಕ ಭಯೊತ್ಫಾದನೆಯನ್ನು ಸಮಾಜದಲ್ಲಿ ಬಿತ್ತುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.ದಾಸ್ಯದ ಮನೋಭಾವವನ್ನು ಪ್ರೇರೇಪಿಸುವ ಮೂಢ ನಂಬಿಕೆ ಆಚರಣೆಗಳ ವಿರುದ್ಧ ಸಾಮಾಜಿಕ ಜಾಗೃತಿ ಆಗಬೇಕಾಗಿದೆ.ಯುವ ಜನರಲ್ಲಿ ಈ ಜಾಗೃತಿ ಹೆಚ್ಚಾಗಬೇಕಾಗಿದೆ ಎಂದು ಕೇಶವ ಧರಣಿ ತಿಳಿಸಿದರು. ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗುವನ್ನು ಕೊಂದಿರುವ ಅಮಾನುಷ ಘಟನೆ, ಚಂದ್ರಗುತ್ತಿಯಲ್ಲಿ ದೇವರ ಹೆಸರಿನಲ್ಲಿ ದಲಿತ ಹೆಣ್ಣು ಮಕ್ಕಳ ಬೆತ್ತಲೆ ಸೇವೆ ಇಂತಹ ಕೃತ್ಯಗಳಿಗೆ ಕೆಲವು ಉದಾಹರಣೆಗಳಾಗಿವೆ. ಚಂದ್ರಗುತ್ತಿ ಯಲ್ಲಿ ಬೆತ್ತಲ ಸೇವೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುತ್ತಿದ್ದ ಅಲ್ಲಿನ ಅರ್ಚನೆ ಮಾಡುವ ಪೂಜಾರಿಗಳಾಗಲಿ ,ಅವರ ಮನೆಯವರಾಗಲಿ ಈ ಸೇವೆ ಮಾಡುತ್ತಿರಲಿಲ್ಲ ಎಂದರು. ಕುವೆಂಪು ಅವರು ಮೂಲ ನಕ್ಷತ್ರದಲ್ಲಿ ಹುಟ್ಟಿದವರು. ವೈಜ್ಞಾನಿಕ ತಳಹದಿಯಲ್ಲಿ ನಿಂತಿರುವ ಇಸ್ರೋ ಕೇಂದ್ರದಲ್ಲಿ ರಾಕೆಟ್ ಉಡ್ಡಯನ ಮಾಡುವಾಗಲು ರಾಹು ಕಾಲ ಎಂದು ಕಾಲ ನೋಡುವ ವಿಜ್ಞಾನಿಗಳ ಮನೋಭಾವವೂ ಬದಲಾಗಬೇಕಾಗಿದೆ. ಮಾನವೀಯತೆಯೊಂದಿಗಿನ ಧಾರ್ಮಿಕ ಆಚರಣೆ ,ಜನರಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಕೇಶವ ಧರಣಿ ತಿಳಿಸಿದರು. ಸಮಾರಂಭದಲ್ಲಿ ಉಪನ್ಯಾಸಕಿ ಡಾ.ಆಶಾಲತಾ ಮಾತನಾಡುತ್ತಾ ಭಾರತದ ಪ್ರಜಾಪ್ರಭುತ್ವದಲ್ಲಿ ಜಾತೀಯ ಅಸಮಾನತೆ, ಆರ್ಥಿಕ ಅಸಮಾನತೆ ಪ್ರಮುಖ ಸವಾಲಾಗಿದೆ. ಸಂವಿಧಾನದ ಆಶಯಗಳು ನೆಲೆಗೊಳ್ಳಬೇಕಾದರೆ ತಮ್ಮ ಮೇಲಿನ ಶೋಷಣೆಯನ್ನು ತಡೆಯಬೇಕಾದರೆ ದಲಿತ ಸಂಘಟನೆಗಳು ಒಂದಾಗ ಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿ ಸೋಜ,ಪ್ರೊ.ಎಂ.ಎಸ್.ಕೊಟ್ಯಾನ್, ದಲಿತ ಸಂಘರ್ಷ ಸಮಿತಿಯ ಮುಖಂಡ ಎಂ.ಎಸ್.ದೇವದಾಸ್, ಪಡಿ ಸಂಸ್ಥೆಯ ಸಂಚಾಲಕ ರೆನ್ನಿ ಡಿ ಸೋಜ, ಸಮುದಾಯ ಸಂಘಟನೆಯ ಅಧ್ಯಕ್ಷ ವಾಸುದೇವ ಉಚ್ಚಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಕೆ.ಎಸ್. ಸತೀಶ್‌ಕುಮಾರ್ ವೇದಿಕೆಯ ಉದ್ದೇಶದ ಬಗ್ಗೆ ವಿವರಿಸಿದರು.ಜಿಲ್ಲಾ ಸಂಚಾಲಕ ನಾರಾಯಣ ಕಿಲಂಗೋಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News