ವಿದ್ಯಾರ್ಥಿಗಳಿಂದ ಸುಸಜ್ಜಿತ ಉಡುಪಿ ಬಸ್ ನಿಲ್ದಾಣಗಳ ವಿನ್ಯಾಸ
Update: 2017-06-04 21:54 IST
ಉಡುಪಿ ಜೂ.4: ವಿವೇಚನಾ ರಹಿತ ಯೋಜನೆ ಮತ್ತು ಸ್ಥಳಾಭಾವಗಳಿಂದ ಅನೇಕ ಬಸ್‌ಗಳಿಗೆ ನಿಲ್ಲಲು ಸಾಧ್ಯವಾಗದೆ, ವಾಹನ ನಿಬಿಡತೆಗೆ ಕಾರಣ ವಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಉಡುಪಿ ನಗರಕ್ಕೊಂದು ಸುಸಜ್ಜಿತ ಖಾಸಗಿ ಮತ್ತು ನಗರ ಸಂಚಾರಿ ಬಸ್ ನಿಲ್ದಾಣದ ಸಂರಚನೆಯನ್ನು ಮಾಡಿದ್ದಾರೆ. ವಿಭಾಗ ಮುಖ್ಯಸ್ಥ ಡಾ.ಬಿ.ರಾಧೇಶ್ಯಾಮ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಗಳಾದ ಭುವನ ಮಿತ್ರ, ವಿಕಾಸ್ ಉಡುಪ, ವಿಕಾಸ್ ರಾವ್ ಮತ್ತು ಕಾರ್ತಿಕ್ ಪಿ. ವಿನ್ಯಾಸಕ್ಕೆ ಪೂರ್ವಭಾವಿಯಾಗಿ ಮಾಡಿದ ಸರ್ವೇಕ್ಷಣೆಯಲ್ಲಿ ನಿಲ್ದಾಣಗಳ ಮುಖ್ಯ ಸ್ಥಳಗಳನ್ನು ಮತ್ತು ಅಲ್ಲಿ ಜರಗುವ ಮುಖ್ಯ ಚಟುವಟಿಕೆಗಳನ್ನು ಗುರು ತಿಸಿದ್ದು, ಜಿಲ್ಲೆಯ ಒಟ್ಟು ಜನಸಂಖ್ಯೆ, ಬಸ್ಸುಗಳ ಸಂಖ್ಯೆ, ನಿಲ್ದಾಣಕ್ಕೆ ಬಂದು ಹೋಗುವ ಬಸ್ಸುಗಳ ಸಂಖ್ಯೆ, ಅಪಘಾತಗಳ ಒಟ್ಟು ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರು. ಸ್ಥಳದ ನಕಾಶೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ ದಿಂದ ಪಡೆದು, ನಿಲ್ದಾಣಗಳ ನೀಲ ನಕಾಶೆಯನ್ನು ವಿನ್ಯಾಸ ಮಾಡಲಾಗಿದೆ. ಖಾಸಗಿ ನಿಲ್ದಾಣದ ನೂತನ ನಕ್ಷೆಯಲ್ಲಿ ಮಂಗಳೂರು (ದಕ್ಷಿಣ) ಮತ್ತು ಕುಂದಾಪುರ(ಉತ್ತರ)ದ ಕಡೆಗೆ ಹೋಗುವ ಬಸ್‌ಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನಿಲ್ಡಾಣವನ್ನು ವಿಭಾಗಿಸಲಾಗಿದೆ. ವೇಗದೂತ ಬಸ್‌ಗಳಿಗೆ ಪ್ರತ್ಯೇಕ ಸಾಲನ್ನು ಕಲ್ಪಿಸಿ ಇರುವ ಸ್ಥಳದ ಗರಿಷ್ಠ ಬಳಕೆಯನ್ನು ಮಾಡಲಾಗುತ್ತಿದೆ. ನಡುವಿನ 45 ಡಿಗ್ರಿ ವಲಯದಲ್ಲಿ ಉಳಿದ ಬಸ್‌ಗಳಿಗೆ ನಿಲ್ಲುವ ಅವಕಾಶ ಕಲ್ಪಿಸ ಲಾಗುತ್ತಿದೆ. ಮೂರು ಮಹಡಿಗಳ ಪ್ರಸ್ತುತ ವಿನ್ಯಾಸವು ಉಳಿದ ವಾಹನಗಳಿಗೆ ಪಾರ್ಕಿಂಗ್, ಅಂಗಡಿ ಮುಂಗಟ್ಟುಗಳು, ಕುಡಿಯುವ ನೀರು, ಪ್ರಯಾಣಿಕರಿಗೆ ತಂಗಲು, ನಿಲ್ಲಲು ಸ್ಥಳಾವಕಾಶ, ಶೌಚಾಲಯಗಳು ಮುಂತಾದವುಗಳಿಗೆ ಅಪಾರ ಅವಕಾಶವನ್ನು ನೀಡಬಹುದು. ನಿಲ್ಡಾಣಕ್ಕೆ ಪ್ರವೇಶವಾಗುವಲ್ಲಿ ಪ್ರಸ್ತುತ ಇರುವ 2 ಮೀಟರುಗಳ ಎತ್ತರವನ್ನು ಕಡಿಮೆ ಮಾಡಿ ಸುಲಭಗೊಳಿಸಲಾಗಿದೆ. ಪ್ರಸ್ತುತ ಇರುವ 25 ಬಸ್‌ಗಳಿಗೆ ನಿಲ್ಲುವ ಅವಕಾಶವನ್ನು 36ಕ್ಕೇರಿಸಬಹುದು. ನಗರ ಸಂಚಾರಿ ಬಸ್ ನಿಲ್ದಾಣವು ಎರಡು ಮಹಡಿಗಳ ವಿನ್ಯಾಸವಾಗಿದ್ದು 22 ಬಸ್‌ಗಳಿಗೆ ಏಕಕಾಲಕ್ಕೆ ನಿಲ್ಲುವ ಅವಕಾಶವನ್ನು ಕಲ್ಪಿಸುತ್ತಿದೆ. ನಗರದ ಪಶ್ಚಿಮ ಭಾಗಕ್ಕೆ ಸಂಚರಿಸುವ ಬಸ್‌ಗಳು ಪ್ರಥಮ ಮಹಡಿಯಲ್ಲೂ, ಪೂರ್ವಭಾಗಕ್ಕೆ ಸಂಚರಿಸುವ ಬಸ್‌ಗಳು ನೆಲಮಹಡಿಯಲ್ಲೂ ನಿಲ್ಲುವ ಅವಕಾಶ ಕಲ್ಪಿಸ ಬಹುದು. ಮೂಲಭೂತ ಸೌಕರ್ಯಗಳಾದ ತಂಗುದಾಣ, ಶೌಚಾಲಯಗಳಿಗೆ ಇಲ್ಲಿ ಸೀಮಿತ ಅವಕಾಶ ಕಲ್ಪಿಸಲಾಗಿದೆ.