ಕತರ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ನಾಲ್ಕು ಗಲ್ಫ್ ದೇಶಗಳು

Update: 2017-06-05 13:01 GMT

ದುಬೈ , ಜೂ. 5 : ಇಸ್ಲಾಮಿಕ್ ಗುಂಪುಗಳಿಗೆ ಬೆಂಬಲ ನೀಡಿದೆ ಎಂದು ಕತರ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಬಹರೈನ್ , ಈಜಿಪ್ಟ್ , ಸೌದಿ ಅರೇಬಿಯಾ ಹಾಗು ಯುಎಇ ಕಡಿದುಕೊಂಡಿವೆ. 

ಈ ನಾಲ್ಕು ದೇಶಗಳು ಕತರ್ ನಿಂದ ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ತರಿಸಲಿವೆ ಎಂದು ಘೋಷಿಸಿವೆ. ಜೊತೆಗೆ ಆ ದೇಶದ ಸೈನಿಕರನ್ನು ತನ್ನ ಯಮನ್ ಯುದ್ಧದ ಪಡೆಯಿಂದ ಹಿಂದೆ ಕಳಿಸುವೆ ಎಂದು ಸೌದಿ ಹೇಳಿದೆ. ಈ ಎಲ್ಲ ದೇಶಗಳು ಕತರ್ ಜೊತೆ ವಾಯು ಹಾಗು ಜಲ ಸಾರಿಗೆ ಸಂಪರ್ಕವನ್ನೂ ಕಡಿದುಕೊಳ್ಳುತ್ತೇವೆ ಎಂದು ಹೇಳಿವೆ.

 ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಈಜಿಪ್ಟ್, ಯುನೈಟಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹ್ರೈನ್ ದೇಶಗಳು ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಸೋಮವಾರ ಕಡಿದುಕೊಂಡಿವೆ.
ಇದರೊಂದಿಗೆ, ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಗೆ ಕತರ್ ಬೆಂಬಲ ನೀಡುತ್ತಿರುವ ವಿವಾದ ತಾರಕಕ್ಕೇರಿದೆ. ಅದೂ ಅಲ್ಲದೆ, ‘ಪ್ರಾದೇಶಿಕ ಶತ್ರು’ ಇರಾನ್‌ನ ಕಾರ್ಯಸೂಚಿಗೆ ಕತರ್ ಕುಮ್ಮಕ್ಕು ನೀಡುತ್ತಿದೆ ಎನ್ನುವ ಆರೋಪವನ್ನೂ ಈ ದೇಶಗಳು ಮಾಡಿವೆ.
ಕತರ್‌ನೊಂದಿಗಿನ ಸಂಚಾರಿ ಸಂಬಂಧವನ್ನು ಕೊನೆಗೊಳಿಸಲಾಗಿದೆ ಎಂದು ಮೂರು ಕೊಲ್ಲಿ ದೇಶಗಳು ಘೋಷಿಸಿದವು ಹಾಗೂ ತಮ್ಮ ದೇಶಗಳನ್ನು ತೊರೆಯಲು ಕತರ್ ಪ್ರವಾಸಿಗರು ಮತ್ತು ನಿವಾಸಿಗಳಿಗೆ ಎರಡು ವಾರಗಳ ಸಮಯಾವಕಾಶವನ್ನು ಒದಗಿಸಿದವು.

ಕತರ್ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುತ್ತಿದೆ ಹಾಗೂ ಆ ಗುಂಪುಗಳ ಹಿಂಸಾತ್ಮಕ ಸಿದ್ಧಾಂತಗಳನ್ನು ಪಸರಿಸುತ್ತಿದೆ ಎಂದು ಸೌದಿ ಅರೇಬಿಯ ಆರೋಪಿಸಿದೆ. ಅದು ಮುಖ್ಯವಾಗಿ ಕತರ್ ಸರಕಾರಿ ಒಡೆತನದ ಉಪಗ್ರಹ ಚಾನೆಲ್ ‘ಅಲ್ ಜಝೀರ’ವನ್ನು ಗುರಿಯಾಗಿರಿಸಿ ಈ ಆರೋಪವನ್ನು ಮಾಡಿದೆ.

‘‘ಮುಸ್ಲಿಮ್ ಬ್ರದರ್‌ಹುಡ್, ಐಸಿಸ್ ಮತ್ತು ಅಲ್-ಖಾಯಿದಾ ಸೇರಿದಂತೆ ವಲಯದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಗುರಿ ಹೊಂದಿರುವ ಹಲವಾರು ಉಗ್ರಗಾಮಿ ಮತ್ತು ವಿಭಜನವಾದಿ ಗುಂಪುಗಳನ್ನು ಕತರ್ ಬೆಂಬಲಿಸುತ್ತಿದೆ ಹಾಗೂ ಈ ಗುಂಪುಗಳ ಸಂದೇಶಗಳು ಮತ್ತು ಸಂಚುಗಳನ್ನು ತನ್ನ ಮಾಧ್ಯಮದ ಮೂಲಕ ನಿರಂತರವಾಗಿ ಪಸರಿಸುತ್ತಿದೆ’’ ಎಂದು ಸೌದಿಯ ಸರಕಾರಿ ಸುದ್ದಿ ಸಂಸ್ಥೆ ಎಸ್‌ಪಿಎ ಹೇಳಿದೆ.

ಕತರ್‌ನ ನೀತಿಯು ಅರಬ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಿದೆ ಹಾಗೂ ಅರಬ್ ಸಮುದಾಯಗಳಲ್ಲಿ ಬಿಕ್ಕಟ್ಟು ಮತ್ತು ವಿಭಜನೆಯ ಬೀಜಗಳನ್ನು ಬಿತ್ತುತ್ತಿದೆ ಎಂದು ಸರಕಾರಿ ಸುದ್ದಿ ಸಂಸ್ಥೆಯ ಮೂಲಕ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಅರಬ್ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶ ಈಜಿಪ್ಟ್ ಹೇಳಿದೆ.
 ಅದೇ ವೇಳೆ, ಕತರ್‌ಗೆ ಹಾರುವ ಎಲ್ಲ ವಿಮಾನಗಳನ್ನು ಮಂಗಳವಾರದಿಂದ ರದ್ದುಪಡಿಸಲಾಗುವುದು ಎಂದು ಯುಎಇಯ ವಿಮಾನಯಾನ ಸಂಸ್ಥೆಗಳಾದ ಎತಿಹಾದ್, ಎಮಿರೇಟ್ಸ್, ಫ್ಲೈದುಬೈ ಮತ್ತು ಏರ್ ಅರೇಬಿಯ ಹೇಳಿವೆ.


ಜೊತೆ ಸೇರಿದ ಯಮನ್
ಯಮನ್‌ನ ಅಂತಾರಾಷ್ಟ್ರೀಯ ಮಾನ್ಯತೆಯ ಸರಕಾರವೂ ಸೋಮವಾರ ಕತರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದೆ. ಇರಾನ್ ಬೆಂಬಲಿತ ಹೌದಿ ಬಂಡುಕೋರರೊಂದಿಗೆ ಕತರ್ ಕೆಲಸ ಮಾಡುತ್ತಿದೆ ಎಂದು ಯಮನ್ ಆರೋಪಿಸಿದೆ ಎಂದು ಎಂದು ಸರಕಾರಿ ಸುದ್ದಿ ಸಂಸ್ಥೆ ‘ಸಬಾ’ ವರದಿ ಮಾಡಿದೆ.
‘‘ಹೌದಿ ಬಂಡುಕೋರರೊಂದಿಗೆ ವ್ಯವಹರಿಸುವ ಹಾಗೂ ಉಗ್ರ ಗುಂಪುಗಳಿಗೆ ಬೆಂಬಲ ನೀಡುವ ಕತರ್‌ನ ವ್ಯವಹಾರಗಳು ಬಹಿರಂಗಗೊಂಡಿವೆ’’ ಎಂದು ಯಮನ್ ಹೇಳಿದೆ.


ಸುಳ್ಳುಗಳ ಅಭಿಯಾನ: ಕತರ್
 ದೋಹಾ, ಜೂ. 5: ಸುಳ್ಳುಗಳು ಮತ್ತು ಕಪೋಲಕಲ್ಪಿತ ವಿಚಾರಗಳನ್ನು ಒಳಗೊಂಡ ಅಭಿಯಾನವೊಂದರ ಬಲಿಪಶು ತಾನಾಗಿದ್ದೇನೆ ಹಾಗೂ ತನ್ನನ್ನು ನಿಗಾದಲ್ಲಿರಿಸಲು ಹೀಗೆ ಮಾಡಲಾಗುತ್ತಿದೆ ಎಂದು ಕತರ್ ಸೋಮವಾರ ಹೇಳಿದೆ.

‘‘ಈ ಪ್ರಚೋದಕ ಅಭಿಯಾನ ಸುಳ್ಳುಗಳು ಹಾಗೂ ಸಂಪೂರ್ಣ ಕಪೋಲಕಲ್ಪಿತ ವಿಚಾರಗಳನ್ನು ಅವಲಂಬಿಸಿದೆ’’ ಎಂದು ಕತರ್ ವಿದೇಶ ಸಚಿವಾಲಯ ಹೇಳಿದೆ.
ಕೊಲ್ಲಿ ಸಹಕಾರ ಮಂಡಳಿಯ ಸದಸ್ಯ ದೇಶವಾಗಿ ತಾನು ಅದರ ಸನ್ನದಿಗೆ ಬದ್ಧನಾಗಿದ್ದೇನೆ ಹಾಗೂ ಇತರ ದೇಶಗಳ ಸಾರ್ವಭೌಮತ್ವವನ್ನು ಗೌರವಿಸಿದ್ದೇನೆ ಹಾಗೂ ಅವುಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಸಚಿವಾಲಯ ಹೇಳಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News