ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಮನಪಾ ಬದ್ಧ: ಮೇಯರ್
ಮಂಗಳೂರು, ಜೂ. 5: ನಗರದ ಸ್ವಚ್ಥತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಮನಪಾ ಬದ್ಧವಾಗಿದೆ. ಪ್ರಸ್ತುತ ಖಾಯಂ ನೌಕರರಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪೌರ ಕಾರ್ಮಿಕರಿಗೂ ಕಾರ್ಡ್ ವಿತರಣೆಯಾಗಲಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಖಾಯಂ, ದಿನಕೂಲಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ, ಸ್ವಚ್ಛತೆ ಹಾಗೂ ಸುರಕ್ಷತಾ ವಸ್ತ್ರ ಹಾಗೂ ಪರಿಕರಗಳನ್ನು ಬಳಸುವ ಕುರಿತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಸವನ್ನು ಪ್ರತ್ಯೇಕಿಸಿ ಮನಪಾ ಜತೆ ಸಹಕರಿಸಲು ಮನವಿ:
ನಗರ ಸ್ವಚ್ಛತೆಯ ಹಿನ್ನೆಲೆಯಲ್ಲಿ ಕಸವನ್ನು ಪ್ರತ್ಯೇಕಿಸುವ ಪ್ರಯತ್ನ ಮಹಾನಗರ ಪಾಲಿಕೆಯ ವತಿಯಿಂದ ಕೆಲ ವರ್ಷಗಳಿಂದ ನಡೆಯುತ್ತಿದೆಯಾದರೂ ಅದಿನ್ನೂ ಯಶಸ್ಸು ಕಂಡಿಲ್ಲ. ಇದಕ್ಕಾಗಿ ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಆಡಳಿತದ ಜತೆ ಸಹಕರಿಸಬೇಕು ಎಂದು ಮೇಯರ್ ಕವಿತಾ ಸನಿಲ್ ಈ ಸಂದರ್ಭ ಸಾರ್ವಜನಿಕರಿಗೆ ಮನವಿ ಮಾಡಿದರು.
ಕಸ ಪ್ರತ್ಯೇಕಿಸುವುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುವುದು ಎಂದು ಅವರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಒಣ ಹಾಗೂ ಹಸಿ ಕಸ ಬೇರ್ಪಡಿಸುವ ಬಗ್ಗೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮನಪಾ ಸದಸ್ಯರಿಗೆ ಪ್ರತಿಜ್ಞೆಯನ್ನು ಮೇಯರ್ ಬೋಧಿಸಿದರು. ಕಾರ್ಯಕ್ರಮದಲ್ಲಿ ಪೌರಕ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಣೆಯನ್ನು ಮಾಡಲಾಯಿತು. ಒಣ ಕಸ-ಹಸಿ ಕಸ ಜಾಗೃತಿಯ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಮೇಯರ್ ಕವಿತಾ ಸನಿಲ್‌ರವರು ಪುರಭವನದ ಹಿಂಬದಿಯಲ್ಲಿ ಗಿಡ ನೆಡುವ ಮೂಲಕ ನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಕನಿಷ್ಠ ತಲಾ 25ರಂತೆ ಒಟ್ಟು 1500 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು.
ಪಾಲಿಕೆಯ ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಮುಖ್ಯ ಸಚೇತಕ ಶಶಿಧರ ಹೆಗ್ಡೆ ಶುಭಹಾರೈಸಿದರು.
ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಶೈಲಜಾ, ಆಶಾ ಡಿಸಿಲ್ವ, ಪಾಲಿಕೆಯ ಹೆಚ್ಚುವರಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಮಹಾ ನಗರಪಾಲಿಕೆಯ ಆಯುಕ್ತ ಮೊಹಮ್ಮದ್ ನಝೀರ್ ಸ್ವಾಗತಿಸಿದರು. ಪಾಲಿಕೆಯ ಎಲ್ಲಾ ಖಾಯಂ ಪೌರ ಕಾರ್ಮಿಕರನ್ನು ಆರೋಗ್ಯ ವಿಮಾ ಯೋಜನೆಗೊಳಪಡಿಸಲಾಗುವುದು ಎಂದು ಅವರು ಹೇಳಿದರು. ಒಟ್ಟು 219 ಪೌರ ಕಾರ್ಮಿಕರು, 42 ಬದಲಿ ಅಥವಾ ದಿನಕೂಲಿ ಪೌರ ಕಾರ್ಮಿಕರು ಹಾಗೂ 623 ಹೊರಗುತ್ತಿಗೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ವಿಮಾ ಯೋಜನೆಯಡಿ ಇಂದು 103 ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಉಳಿದ ಎಲ್ಲಾ ಖಾಯಂ ಪೌರ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ. ಮಾತ್ರವಲ್ಲದೆ ದಿನಗೂಲಿ ಹಾಗೂ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೂ ಸಂಬಂಧಪಟ್ಟ ಕಂಪನಿಗಳ ಮೂಲಕ ಆರೋಗ್ಯ ಭದ್ರತೆಯನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದರು.
ವಾರ್ಷಿಕ 1 ಲಕ್ಷ ರೂ.ವರೆಗಿನ ನಗದು ರಹಿತ ಆರೋಗ್ಯ ಸೇವೆಯು ಈ ವಿಮಾ ಯೋಜನೆಯಡಿ ದೊರಕಲಿದೆ ಎಂದು ಅವರು ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮ ಆರಂಭಕ್ಕೆ ಮೊದಲು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೊ. ವಿನೀತಾ ರೈ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಬಳಿಕ ಪೌರ ಕಾರ್ಮಿಕರಿಗೆ ತರಬೇತಿ ಹಮ್ಮಿಕೊಳ್ಳಲಾಯಿತು. ಮಾಲಿನಿ ವಂದಿಸಿದರು.