ಭಾರತದ ಎನ್‌ಎಸ್‌ಜಿ ಸೇರ್ಪಡೆಗೆ ಚೀನಾ ಮತ್ತೆ ವಿರೋಧ

Update: 2017-06-05 11:36 GMT

ಬೀಜಿಂಗ್, ಜೂ. 5: ಭಾರತ ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಸೇರ್ಪಡೆಗೊಳ್ಳುವುದನ್ನು ಬೆಂಬಲಿಸಲು ಚೀನಾ ಮತ್ತೆ ನಿರಾಕರಿಸಿದೆ. ಹೊಸ ಸನ್ನಿವೇಶಗಳ ಹಿನ್ನೆಲೆಯಲ್ಲಿ ಭಾರತದ ಎನ್‌ಎಸ್‌ಜಿ ಸದಸ್ಯತ್ವ ಪ್ರಯತ್ನವು ಹೆಚ್ಚು ಸಂಕೀರ್ಣಗೊಂಡಿದೆ ಎಂದು ಅದು ಹೇಳಿದೆ.

ಪರಮಾಣು ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿ ಹಾಕದ ದೇಶಗಳು ಎನ್‌ಎಸ್‌ಜಿಗೆ ಸೇರ್ಪಡೆಗೊಳ್ಳುವ ವಿಷಯದಲ್ಲಿ ತಾರತಮ್ಯರಹಿತ ಪರಿಹಾರವೊಂದಿರಬೇಕು ಮತ್ತು ಅದು ಎಲ್ಲ ದೇಶಗಳಿಗೂ ಅನ್ವಯಿಸಬೇಕು ಎಂದು ಚೀನಾ ಅಭಿಪ್ರಾಯಪಟ್ಟಿದೆ.

48 ಸದಸ್ಯರ ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯತ್ವ ಪಡೆಯುವ ಭಾರತದ ಯತ್ನಗಳಿಗೆ ಚೀನಾ ಅಡ್ಡಗಾಲಿಡುತ್ತಾ ಬಂದಿದೆ. ಗುಂಪಿನ ಹೆಚ್ಚಿನ ಸದಸ್ಯರ ಬೆಂಬಲವಿದ್ದರೂ ಚೀನಾ ಮಾತ್ರ ಭಾರತದ ಸೇರ್ಪಡೆಯನ್ನು ವಿರೋಧಿಸುತ್ತಿದೆ.

ನೂತನ ಸದಸ್ಯರ ಸೇರ್ಪಡೆ ವಿಷಯದಲ್ಲಿ ಒಮ್ಮತದ ನಿರ್ಣಯವನ್ನು ಗುಂಪು ಪಾಲಿಸುತ್ತದೆ.

‘‘ಪರಮಾಣು ಪೂರೈಕೆದಾರರ ಗುಂಪಿನ ಬಗ್ಗೆ ಹೇಳುವುದಾದರೆ, ಅದು ನೂತನ ಸನ್ನಿವೇಶಗಳ ಹಿನ್ನೆಲೆಯಲ್ಲಿ ಬರುವ ಹೊಸ ವಿಷಯವಾಗಿದೆ. ಅದು ಹಿಂದೆ ಭಾವಿಸಿರುವುದಕ್ಕಿಂತಲೂ ಹೆಚ್ಚು ಸಂಕೀರ್ಣವಾಗಿದೆ’’ ಎಂದು ಚೀನಾದ ಸಹಾಯಕ ವಿದೇಶ ವ್ಯವಹಾರಗಳ ಸಚಿವ ಲಿ ಹುಯಿಲೈ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆದಾಗ್ಯೂ, ನೂತನ ಸನ್ನಿವೇಶಗಳು ಮತ್ತು ಸಂಕೀರ್ಣತೆಗಳೇನು ಎನ್ನುವುದನ್ನು ಅವರು ವಿವರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News