×
Ad

ಬಾರ್ಜ್ ತೆರವು ಕಾರ್ಯಾಚರಣೆಗೆ ತಾಂತ್ರಿಕ ತಜ್ಞರ ಆಗಮನ

Update: 2017-06-05 17:59 IST

ಮಂಗಳೂರು, ಜೂ.5: ಉಳ್ಳಾಲ ಕಡಲತೀರದಿಂದ 1.6 ಕಿ.ಮೀ. ದೂರದ ಸಮುದ್ರದಲ್ಲಿ ಶನಿವಾರ ಮಧ್ಯಾಹ್ನ ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ದುರಂತಕ್ಕೀಡಾಗಿದ್ದ ಬಾರ್ಜ್‌ನ ತೆರವು ಕಾರ್ಯಾಚರಣೆಗಾಗಿ ಧರ್ತಿ ಕಂಪೆನಿಯ ತಾಂತ್ರಿಕ ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎಡಿಬಿ ಕಾಮಗಾರಿಯ ಯೋಜನಾ ನಿರ್ದೇಶಕ ಗೋಪಾಲ ನಾಯ್ಕ ತಿಳಿಸಿದ್ದಾರೆ.

ರವಿವಾರವೇ ಮೂವರು ತಾಂತ್ರಿಕ ತಜ್ಞರು ಆಗಮಿಸಿದ್ದು, ಇಂದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಂಡೆಗೆ ಬಡಿದ ವಾಲಿ ನಿಂತಿರುವ ಬಾರ್ಜನ್ನು ಯಥಾ ಸ್ಥಿತಿಗೆ ತರಬಹುದೇ ಎಂದು ಪರಿಶೀಲನೆ ನಡೆಸಿದ ಬಳಿಕ ಮುಂಬೈ ಅಥವಾ ಸಿಂಗಾಪುರದಿಂದ ಇನ್ನಷ್ಟು ತಜ್ಞರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ. ಈ ಪ್ರಕ್ರಿಯೆಗೆ ಇನ್ನೂ ಮೂರ್ನಾಲ್ಕು ದಿನಗಳು ಬೇಕಾದೀತು ಎಂದು ಗೋಪಾಲ ನಾಯ್ಕ ಹೇಳಿದ್ದಾರೆ.

ಖಾಸಗಿ ಹೊಟೇಲಲ್ಲಿ ರಕ್ಷಿಸಲ್ಪಟ್ಟ ಕಾರ್ಮಿಕರು: ದುರಂತಕ್ಕೀಡಾದ ‘ಡ್ರೆಜ್ಜರ್ ಐಬಿಎಸ್’ ಎಂಬ ಹೆಸರಿನ ಈ ಬಾರ್ಜ್‌ನಿಂದ ಶನಿವಾರ ಸಂಜೆಯೇ ನಾಲ್ಕು ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಶನಿವಾರ ಬೆಳಗ್ಗೆ ಉಳಿದ 23 ಮಂದಿಯನ್ನು ರಕ್ಷಿಸಲಾಗಿತ್ತು. ಇದೀಗ ಎಲ್ಲ ಕಾರ್ಮಿಕರು ಸುರತ್ಕಲ್‌ನ ಖಾಸಗಿ ಹೊಟೇಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಒಂದೋ ಊರಿಗೆ ಹೋಗಬಹುದು ಅಥವಾ ಕಂಪೆನಿಯ ಮುಖ್ಯಸ್ಥರು ಹೇಳಿದಂತೆ ಇತರ ಕೆಲಸದಲ್ಲಿ ನಿರತರಾಗಬಹುದು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಗೋಪಾಲ ನಾಯ್ಕ ತಿಳಿಸಿದ್ದಾರೆ.

ಆರೋಗ್ಯ ಸ್ಥಿರ: ಬಾರ್ಜ್‌ನಿಂದ ರಕ್ಷಿಸಲ್ಪಟ್ಟ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಸದ್ಯ ಇಲಾಖೆಯ ಸುಪರ್ದಿಯಲ್ಲಿ ಯಾರೂ ಇಲ್ಲ ಎಂದು ನಗರ ಪೊಲೀಸ್ ಉಪಾಯುಕ್ತ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.

ಮಳೆ ಅಡ್ಡಿ ಸಾಧ್ಯತೆ: ಸೋಮವಾರ ಮಧ್ಯಾಹ್ನದವರೆಗೆ ಬಿಸಿಲು ಕಾಣಿಸಿಕೊಂಡಿದ್ದರೆ, ಸಂಜೆಯ ವೇಳೆಗೆ ಮಂಗಳೂರು-ಉಳ್ಳಾಲ ಸುತ್ತಮುತ್ತ ಬಿರುಸಿನ ಮಳೆ ಸುರಿದಿದೆ. ಹಾಗಾಗಿ ಮಳೆಯು ಬಾರ್ಜ್ ಪರಿಶೀಲನೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಉಳ್ಳಾಲದಲ್ಲಿ ಸಂಜೆಯ ಬಳಿಕ ಕಡಲು ಪ್ರಕ್ಷುಬ್ಧ ತಾಳುತ್ತದೆ. ಇದು ಮುಂಜಾನೆಯವರೆಗೂ ಇರುತ್ತದೆ. ಮಳೆ ಬಂದಾಗ ಕಡಲಿನ ಆರ್ಭಟ ಬಿರುಸಾಗಿಯೇ ಇರುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News