×
Ad

ಕೃಷಿಕನ ಮೇಲೆ ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆ

Update: 2017-06-05 21:20 IST

ಕೋಟ, ಜೂ. 5: ಸೂಕ್ತ ದಾಖಲೆಗಳೊಂದಿಗೆ ಹೈನುಗಾರಿಕೆಗೆ ದನ ಸಾಗಿಸುತ್ತಿದ್ದ ಶಿವಮೊಗ್ಗದ ಕೃಷಿಕರೊಬ್ಬರ ಮೇಲೆ ಗೋರಕ್ಷಕರ ತಂಡ ದಾಳಿ ನಡೆಸಿ, ಕಬ್ಬಿಣದ ರಾಡ್‌ನಿಂದ ತೀವ್ರವಾಗಿ ಹಲ್ಲೆಗೈದಿರುವ ಘಟನೆ ಜೂ. 2ರಂದು ಬೆಳಗಿವ ಜಾವ 5:45ರ ಸುಮಾರಿಗೆ ಗುಳ್ಳಾಡಿ ಸೇತುವೆ ಸಮೀಪ ಇರುವ ನಾಗ ದೇವಸ್ಥಾನದ ಬಳಿ ನಡೆದಿದೆ. 

ಗೋರಕ್ಷಕರಿಂದ ಹಲ್ಲೆಗೊಳಗಾದ ಶಿವಮೊಗ್ಗ ಜಿಲ್ಲೆಯ ಹೊಳೆಬೆನ್ನೊಳ್ಳಿಯ ಕುರ್ಲೆ ನಿವಾಸಿ ಸಿದ್ದಪ್ಪ ಎಂಬವರ ಪುತ್ರ ನೀಲಕಂಠ (44) ತೀವ್ರವಾಗಿ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೆಕ್ಕಟ್ಟೆ ಬಜರಂಗದಳದ ಸಂಚಾಲಕ ಸಿರಿ ಯಾನೆ ಶ್ರೀನಾಥ್ ಶೆಟ್ಟಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ದೂರಲಾಗಿದೆ.

ನೀಲಕಂಠ  ಕೃಷಿ ಮತ್ತು ಜಾನುವಾರು ಸಾಗಾಣಿಕೆ ಕೆಲಸ ಮಾಡಿಕೊಂಡಿದ್ದು ಜೂ. 2ರಂದು ಬೆಳಗಿನ ಜಾವ 5 ಗಂಟೆಗೆ ಕೋಟ ಗಿಳಿಯಾರು ಗ್ರಾಮದ ಸಿದ್ದಣ್ಣ ಎಂಬವರಿಂದ ಎರಡು ದನಗಳನ್ನು ಹಣಕ್ಕೆ ಖರೀದಿಸಿದ್ದರು. ನೀಲಕಂಠ ಈ ಬಗ್ಗೆ ಪಶು ವೈದ್ಯರ ದೃಢಪತ್ರ ಹಾಗೂ ಕೋಟ ಗ್ರಾಮ ಪಂಚಾಯತ್‌ ನಿಂದ ಪರವಾನಿಗೆ ಪಡೆದುಕೊಂಡು ನಾಗೇಶ್ ಎಂಬವರ ಏಸ್ ವಾಹನದಲ್ಲಿ ದನಗಳನ್ನು ಶಿವಮೊಗ್ಗಕ್ಕೆ ಸಾಗಿಸುತ್ತಿದ್ದರು. ಬೆಳಗ್ಗೆ 5:45ರ ಸುಮಾರಿಗೆ ಗುಳ್ಳಾಡಿ ನಾಗ ದೇವಸ್ಥಾನದ ಬಳಿ ಎರಡು ಬೈಕಿನಲ್ಲಿ ಬಂದ ನಾಲ್ವರು ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ನಿಲ್ಲಿಸಿ, ನೀಲಕಂಠರನ್ನು ವಾಹನದಿಂದ ಎಳೆದ ನಾಲ್ವರ ಪೈಕಿ ಶ್ರೀನಾಥ ಶೆಟ್ಟಿ ಕಬ್ಬಿಣದ ರಾಡಿನಿಂದ ಕಾಲಿಗೆ ಹೊಡೆದಿದರು. ಇತರ ಮೂವರು ಕೈಗಳಿಂದ ಹೊಡೆದು, ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಜೂ. 4ರಂದು ರಾತ್ರಿ ಹಲ್ಲೆಯ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೀಲ ಕಂಠ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಆರೋಪಿಗಳ ಬಂಧನಕ್ಕೆ ಆಗ್ರಹ:

ಗೋರಕ್ಷಕರಿಂದ ಹಲ್ಲೆಗೆ ಒಳಗಾದ ನೀಲಕಂಠ ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಮುಖಂಡರು, ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಶೀಘ್ರವೇ ಗೂಂಡಾ ಕಾಯಿದೆಯಡಿ ಬಂಧಿಸುವಂತೆ ಒತ್ತಾಯಿಸಿದರು.

ದನ ಸಾಗಾಟಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಿದ್ದರೂ ಏಕಾಏಕಿ ದಾಳಿ ನಡೆಸಿರುವುದು ಸರಿಯಲ್ಲ. ಇವರಿಗೆ ಯಾವುದೇ ಮಾಹಿತಿ ಬಂದಿದ್ದರೂ ಅದನ್ನು ಪೊಲೀಸರಿಗೆ ತಿಳಿಸಬಹುದಿತ್ತು. ಅದರ ಬದಲು ಇವರೇ ಕಾನೂನು ಕೈಗೆ ತೆಗೆದುಕೊಂಡಿರುವುದು ಅಕ್ಷಮ್ಯ. ಪೊಲೀಸ್ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಈ ಬಗ್ಗೆ ಕ್ರಮ ಜರಗಿಸಬೇಕಾಗಿ ದಸಂಸ ಮುಖಂಡ ಉದಯ ಕುಮಾರ್ ತಲ್ಲೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News