ಮಣಿಪಾಲ ವಿವಿಯಲ್ಲಿ ವಿಶ್ವ ಪರಿಸರ ದಿನಾಚರಣೆ
ಮಣಿಪಾಲ, ಜೂ.5: ದೇಶದ ಅತ್ಯುತ್ತಮ ‘ಗ್ರೀನ್ ಕ್ಯಾಂಪಸ್’ನ್ನು ಹೊಂದಿರುವ ಹೆಗ್ಗಳಿಕೆಯ ಮಣಿಪಾಲ ವಿವಿಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ಡಾ.ಟಿಎಂಎ ಪೈ ಫೌಂಡೇಶನ್‌ಗೆ ಸೇರಿದ ಶಾಲಾ-ಕಾಲೇಜುಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ಮಣಿಪಾಲ ವಿವಿ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ರ್ಯಾಲಿ, ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ತಜ್ಞರಿಂದ ಅರಿವು ಮೂಡಿಸಲಾಯಿತು.
ಸ್ಕೂಲ್ ಆಫ್ ಲೈಫ್ ಸಾಯನ್ಸ್ ಕ್ಯಾಂಪಸ್‌ನ ಪ್ಲಾನೆಟೋರಿಯಂ ಬಳಿಯಿಂದ ಪ್ರಾರಂಭಗೊಂಡ ವಿದ್ಯಾರ್ಥಿಗಳ ರ್ಯಾಲಿ ಎಂಐಟಿ ಹಾಸ್ಟೆಲ್‌ನ 18ನೇ ಬ್ಲಾಕ್ ಬಳಿಯಲ್ಲಿ ಮುಕ್ತಾಯಗೊಂಡಿತು. ಅಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಸೇರಿ 200 ಗಿಡಗಳನ್ನು ನೆಟ್ಟರು.
ಎಂಐಟಿ ವಜ್ರ ಮಹೋತ್ಸವ ಸಂದರ್ಭದಲ್ಲಿ ಎರಡು ಎಕರೆ ಜಾಗದಲ್ಲಿ ‘ವಜ್ರವನ’ವನ್ನು ಬೆಳೆಸುವ ಯೋಜನೆಗೆ ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಇಲ್ಲಿ ಹಸಿರು ವನವನ್ನು ಬೆಳೆಸುವ ಯೋಜನೆ ಇದೆ.
ಕುಂಜಿಬೆಟ್ಟು ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನ ವಿದ್ಯಾರ್ಥಿನಿ ಭಾವನಾ ಕೆ.ಬಿ. ಅವರು ಪರಿಸರ, ಗಿಡಮರಗಳ ಅಗತ್ಯತೆ, ಪರಿಸರಸಹ್ಯ ಬೆಳವಣಿಗೆ ಕುರಿತಂತೆ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಪ್ರೊ ವೈಸ್ ಚಾನ್ಸಲರ್ ಹಾಗೂ ಕೆಎಂಸಿ ಡೀನ್ ಡಾ.ಪೂರ್ಣಿಮಾ ಬಾಳಿಗಾ ಪರಿಸರ ದಿನಾಚರಣೆಯ ಸಂದೇಶ ನೀಡಿದರು. ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿಎಚ್‌ವಿ ಪೈ ಸ್ವಾಗತಿಸಿ, ಡಾ.ಸುಮಾ ನಾಯರ್ ವಂದಿಸಿದರು.