ಆಸ್ಪತ್ರೆಯಲ್ಲಿ ಹೆರಿಗೆಗೆ ನಿರಾಕರಣೆ ತೋರಿದ ಸಿಬ್ಬಂದಿಗಳ ವಿರುದ್ಧ ದೂರು

Update: 2017-06-05 17:34 GMT

ಕುಂದಾಪುರ, ಜೂ.5: ಹೆರಿಗೆ ನೋವಿನೊಂದಿಗೆ ಜೂ.3ರಂದು ಮಧ್ಯರಾತ್ರಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಯ ಸಿಬ್ಬಂದಿಗಳು ಹೆರಿಗೆಗೆ ನಿರಾಕರಿಸಿ ವಾಪಾಸು ಕಳುಹಿಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋಡಿಯ ಹಳೆಅಳಿವೆ ನಿವಾಸಿ ಆಶಾ(29) ಎಂಬವರಿಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ತಾಯಿ ಬಾಬಿ ಹಾಗೂ ಚಿಕ್ಕಮ್ಮ ಅಮಿತಾ ರಿಕ್ಷಾದಲ್ಲಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದರು. ಅಲ್ಲಿ ಚಿಕಿತ್ಸೆಗೆ ಒಳಗೆ ಕರೆದುಕೊಂಡು ಹೋದ ಆಸ್ಪತ್ರೆಯ ನರ್ಸ್‌ಗಳು ಕೆಲವೇ ನಿಮಿಷಗಳಲ್ಲಿ ಗರ್ಭಿಣಿಯನ್ನು ಹೊರಗೆ ಕರೆದುಕೊಂಡು ಬಂದು ವೈದ್ಯರು ರಜೆಯಲ್ಲಿದ್ದಾರೆ. ಇವರನ್ನು ಉಡುಪಿಯ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಎಂದು ಹೇಳಿ ಸಾಗಹಾಕಿದರು.

ಈ ಬಗ್ಗೆ ಮನೆಯವರು ಸಿಬ್ಬಂದಿಗಳೊಂದಿಗೆ ಮನವಿ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ. ಕೊನೆಗೆ ಆಶಾರ ವೈದ್ಯರಿಗೆ ಕರೆ ಮಾಡಿದಾಗ ಅವರು ಕೂಡ ಯಾವುದೇ ರೀತಿ ಸ್ಪಂದಿಸಲಿಲ್ಲ ಎಂದು ಅಮಿತಾ ದೂರಿದ್ದಾರೆ. ಈ ವೇಳೆ 108 ಆಂಬುಲೆನ್ಸ್‌ಗೆ ಮೂರು ಬಾರಿ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಬಳಿಕ ದಿಕ್ಕು ತೋಚದೆ ಆಶಾರ ತಾಯಿ ಮತ್ತು ಚಿಕ್ಕಮ್ಮ ಗರ್ಭಿಣಿ ಮಹಿಳೆ ಯನ್ನು ರಸ್ತೆ ಬದಿಗೆ ಕರೆ ತಂದು ವಾಹನಗಳಿಗಾಗಿ ಪರದಾಟ ನಡೆಸಿದರು.

ಅಲ್ಲಿಯೂ ವಾಹನ ಸಿಗದಾಗ ಆಸ್ಪತ್ರೆಯಿಂದ ಸ್ವಲ್ಪ ದೂರದವರೆಗೆ ಹನಿ ಮಳೆಯಲ್ಲಿಯೇ ಗರ್ಭಿಣಿಯ ಜೊತೆ ನಡೆದುಕೊಂಡು ಬಂದರು. ಅಲ್ಲಿ ಸಿಕ್ಕಿದ ರಿಕ್ಷಾದಲ್ಲಿ ಗರ್ಭಿಣಿಯನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆತಂದರು. ಖಾಸಗಿ ಆಸ್ಪತ್ರೆಗೆ ಕರೆ ತಂದ ಐದೇ ನಿಮಿಷದಲ್ಲಿ ಆಶಾ ಹೆಣ್ಣು ಮಗುವಿಗೆ ಜನ್ಮ ನೀಡಿ ದರು. ಇದೀಗ ತಾಯಿ ಮಗು ಸೌಖ್ಯವಾಗಿದ್ದು, ಶ್ರೀದೇವಿ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಆಶಾ ಮನೆಯವರು ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿದ್ದಾರೆ. ಅದರಂತೆ ಕೇಂದ್ರವು ಆಶಾಳಿಗೆ ಆಗಿರುವ ಅನ್ಯಾಯದ ವಿರುದ್ದ ಸಂಬಂಧಪಟ್ಟ ಇಲಾಖೆಗೆ ಲಿಖಿತವಾದ ದೂರನ್ನು ಸಲ್ಲಿಸಿದೆ. ‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದೀಗ ಮಹಿಳಾ ಸಾಂತ್ವಾನ ಕೇಂದ್ರದಿಂದ ದೂರು ಬಂದಿದ್ದು, ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲಾ ಗುವುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಉದಯ್ ಶಂಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News