ಕೊಲ್ಲಿ ಬಿಕ್ಕಟ್ಟು: 3ನೆ ದಿನವೂ ತೈಲ ಬೆಲೆ ಕುಸಿತ

Update: 2017-06-06 13:24 GMT

ಸಿಂಗಾಪುರ, ಜೂ. 6: ಅರಬ್ ದೇಶಗಳಲ್ಲಿ ನೆಲೆಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ತೈಲ ಬೆಲೆಯು ಸತತ ಮೂರನೆ ದಿನವಾದ ಮಂಗಳವಾರವೂ ಕುಸಿಯಿತು. ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ತೈಲ ಮಾರುಕಟ್ಟೆಯನ್ನು ನಿಯಂತ್ರಿಸಲು ‘ಒಪೆಕ್’ ತೆಗೆದುಕೊಂಡ ಕ್ರಮಗಳನ್ನು ಅನುಸರಿಸಲು ತೈಲ ಉತ್ಪಾದಕ ದೇಶಗಳು ಮುಂದಾಗಲಾರವು ಎಂಬ ಶಂಕೆಯಿಂದಾಗಿ ಬೆಲೆ ಇಳಿದಿದೆ.

ಅಮೆರಿಕದ ತೈಲ ಉತ್ಪಾದನೆಯಲ್ಲಿ ಆಗುತ್ತಿರುವ ನಿರಂತರ ಹೆಚ್ಚಳವೂ ಕಚ್ಚಾ ತೈಲ ಬೆಲೆ ಇಳಿಕೆಗೆ ಕಾರಣವಾಯಿತು ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲವು ಬ್ಯಾರಲ್‌ಗೆ 49.27 ಡಾಲರ್‌ಗೆ ಮಾರಾಟವಾಯಿತು. ಇದು ನಿನ್ನೆಯ ದಿನದ ಮುಕ್ತಾಯದ ವೇಳೆಗೆ ಇದ್ದ ಬೆಲೆಗಿಂತ 20 ಸೆಂಟ್ಸ್ ಕಡಿಮೆಯಾಗಿದೆ.

ಇದು ಮೇ 25ರಂದು ಇದ್ದ ಬೆಲೆಗಿಂತ 9 ಶೇಕಡ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ನಿಯಂತ್ರಣ ತರಲು ತೈಲ ಉತ್ಪಾದನೆಯಲ್ಲಿನ ಕಡಿತವನ್ನು 2018ರ ಪ್ರಥಮ ತ್ರೈಮಾಸಿಕಕ್ಕೂ ವಿಸ್ತರಿಸಲು ಒಪೆಕ್ ದೇಶಗಳು ಅಂದು (ಮೇ 25ರಂದು) ನಿರ್ಧರಿಸಿದ್ದವು.

ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (ಡಬ್ಲುಟಿಐ)ನ ಕಚ್ಚಾ ತೈಲ ಬೆಲೆಯು ಬ್ಯಾರಲ್‌ಗೆ 18 ಸೆಂಟ್ಸ್‌ನಷ್ಟು ಕಡಿಮೆಯಾಗಿ 47.21 ಡಾಲರ್ ಆಗಿದೆ. ಇದು ಮೇ 25ರ ಬೆಲೆಗಿಂತ 8 ಶೇ. ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News