×
Ad

ಕಂಬಳ: ರಾಜ್ಯ ಸರಕಾರದ ಪರಿಷ್ಕೃತ ಕಾಯ್ದೆಗೆ ಕೇಂದ್ರ ಅನುಮೋದನೆ

Update: 2017-06-07 20:32 IST

ಮಂಗಳೂರು, ಜೂ.7: ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಪರಿಷ್ಕರಿಸಿ ಕಳುಹಿಸಿದ ಕಾಯ್ದೆಗೆ ಕೇಂದ್ರ ಸರಕಾರ ಅನುಮೋದಿಸಿ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ ಚೌಧರಿ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಂಬಳ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಆಯಾಮವನ್ನು ಹೊಂದಿರುವ ಕ್ರೀಡೆಯಾಗಿದೆ. ಇದರ ಉಳಿವಿಗಾಗಿ ರಾಜ್ಯ ಸರಕಾರ ಕೂಡ ವಿಶೇಷ ಆಸ್ಥೆ ವಹಿಸಿ ಕಾಯ್ದೆ ಮಾಡಿ ಕೇಂದ್ರಕ್ಕೆ ಕಳುಹಿಸಿತ್ತು. ಇದೀಗ ರಾಜ್ಯ ಸರಕಾರ ಕಳುಹಿಸಿದ ಪರಿಷ್ಕೃತ ಕಾಯ್ದೆಗೆ ಮೂರು ದಿನಗಳ ಹಿಂದಷ್ಟೇ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲಿ ರಾಷ್ಟ್ರಪತಿಯವರ ಅಂಕಿತ ಬೀಳುವ ವಿಶ್ವಾಸವಿದೆ. ಈ ಮೂಲಕ ಇಲ್ಲಿನ ಬಹುಪರಂಪರೆಯ ಕಂಬಳದ ರಕ್ಷಣೆಗೆ ನಮ್ಮೆಲ್ಲರ ಸಹಕಾರವಿದೆ ಎಂದು ಅವರು ಹೇಳಿದರು.

ದೇಶದ ಕೆಲವು ಕಡೆಗಳಲ್ಲಿ ಮಾತ್ರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯನಿಕೇಶನ್ ಟೆಕ್ನಾಲಜಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಈ ಶಿಕ್ಷಣ ಸಂಸ್ಥೆಯ ಮೂಲಕ ಜಾಗತಿಕವಾಗಿ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ. ಪ್ರಸ್ತುತ ಮಂಗಳೂರು ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದಲ್ಲಿಯೇ ಹೊಸ ಸಾಧನೆಯನ್ನು ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಇಲ್ಲಿನ ಶೈಕ್ಷಣಿಕ ಶ್ರೇಷ್ಠತೆಯ ಕಾರಣದಿಂದಾಗಿ ಇಲ್ಲೂ ಕೂಡ ರಾಷ್ಟ್ರೀಯ ಕೇಂದ್ರವನ್ನು ತೆರೆಯಬಹುದಾಗಿದೆ. ಪ್ರತೀ ರಾಜ್ಯದ ರಾಜಧಾನಿಯಲ್ಲಿ ಈ ಕೇಂದ್ರ ಸ್ಥಾಪನೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದರೆ ದ.ಕ. ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಅವರು ಮನವಿ ಸಲ್ಲಿಸಿದರೆ ಇಲ್ಲೂ ಕೂಡ ಕೇಂದ್ರ ತೆರೆಯಲು ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ಪ್ರಸ್ತುತ ಐಟಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಇದರ ವಿಸ್ತರಣೆ ಹಾಗೂ ಇಲ್ಲಿನ ಶೈಕ್ಷಣಿಕ ಸಾಧನೆಯ ಹಿನ್ನೆಲೆಯಲ್ಲಿ ಇಲ್ಲಿಗೂ ಕೂಡ ಐಟಿ ಪಾರ್ಕ್ ನೀಡುವಂತೆ ಸಂಸದ ನಳಿನ್ ಅವರು ಮನವಿ ಮಾಡಿದ್ದಾರೆ. ರಾಜ್ಯ ಸರಕಾರ ಸೂಕ್ತ ಸ್ಥಳಾವಕಾಶ ನೀಡಿದರೆ ಕೇಂದ್ರ ಸರಕಾರ ಐಟಿ ಪಾರ್ಕ್‌ಗೆ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಕೈಗೊಂಡ ಗೋ ಮಾರಾಟ ಹಾಗೂ ಸಾಗಾಟದ ಮೇಲಿನ ಕೆಲವು ನಿರ್ಬಂಧದ ಬಗೆಗೆ ಎದ್ದಿರುವ ವಿರೋಧದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋ ಹತ್ಯೆ ಕುರಿತಂತೆ ಈಗ ಇರುವ ನಿಯಮಾವಳಿಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಹೊಸ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ ಕೆಲವರು ಇದನ್ನು ತಪ್ಪು ದಾರಿಗೆ ಎಳೆದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News