ಜೂ.18: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಡುಪಿಗೆ
ಉಡುಪಿ, ಜೂ.7: ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೂ.18ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ದೇವಸ್ಥಾನಗಳಿಗೆ ಭೇಟಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜೂ.18ರಂದು ಬೆಳಗ್ಗೆ 10:25ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಷ್ಟ್ರಪತಿಗಳು ಅಲ್ಲಿಂದ ಐಎಎಫ್ ವಿಮಾನದಲ್ಲಿ 11 ಗಂಟೆಗೆ ಉಡುಪಿಗೆ ಆಗಮಿಸಿ ಅಲ್ಲಿಂದ ಸರಕಾರಿ ಗೆಸ್ಟ್‌ಹೌಸ್‌ಗೆ ತೆರಳಲಿದ್ದಾರೆ. ಅಪರಾಹ್ನ 12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಕೃಷ್ಣನ ದರ್ಶನ, ಪರ್ಯಾಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಲಿದ್ದಾರೆ.
12.45ಕ್ಕೆ ಬಿಆರ್‌ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವತಿಯಿಂದ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಜಾಗದಲ್ಲಿ ನಿರ್ಮಿಸಲಾಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸಿ, ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 1:30ಕ್ಕೆ ಸರಕಾರಿ ಪ್ರವಾಸಿ ಮಂದಿರಕ್ಕೆ ಆಗಮಿಸಿ, 3 ಗಂಟೆಗೆ ಕೊಲ್ಲೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 4:15ಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ. 4:45ಕ್ಕೆ ದೇವಸ್ಥಾನದಿಂದ ಹೆಲಿಪ್ಯಾಡ್‌ಗೆ. 5:25ಕ್ಕೆ ವಿಶೇಷ ಐಎಎಫ್ ವಿಮಾನದಲ್ಲಿ ಮಂಗಳೂರಿಗೆ. 6:05ಕ್ಕೆ ಮಂಗಳೂರಿನಿಂದ ಹೊಸದಿಲ್ಲಿಗೆ.
ಪೂರ್ವಭಾವಿ ಸಭೆ: ರಾಷ್ಟ್ರಪತಿಗಳ ಉಡುಪಿ ಜಿಲ್ಲೆ ಭೇಟಿ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆದು ಭೇಟಿ ವೇಳೆ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಸವಿವರ ಚರ್ಚೆ ನಡೆಸಲಾಯಿತು.
ವಿವಿಧ ವಿಭಾಗಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಮುಂಜಾಗರೂಕತೆ, ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೊಣೆ ವಹಿಸಲಾಯಿತು. ಮೆಡಿಕಲ್ ಯೂನಿಟ್, ಆಹಾರ ಸುರಕ್ಷಾ ಅಧಿಕಾರಿಗಳು ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕುಮಾರ್, ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ, ಉಪವಿಬಾಗಾಧಿಕಾರಿ ಶಿಲ್ಪಾನಾಗ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಡಿಸಿಎಫ್ ಅಮರನಾಥ್ ಸೇರಿದಂತೆ ಜಿಲ್ಲೆಯ ತಹಶೀಲ್ದಾರರು, ಇಂಜಿನಿಯರಿಂಗ್ ವಿಭಾದ ಅಧಿಕಾರಿಗಳು ಉಪಸ್ಥಿತರಿದ್ದರು.