ಪ್ರತಿ ರವಿವಾರ ಸಾವಯವ ಸಂತೆ
ಉಡುಪಿ, ಜೂ.7: ದೊಡ್ಡಣಗುಡ್ಡೆಯಲ್ಲಿರುವ ಶಿವಳ್ಳಿ ತೊಟಗಾರಿಕಾ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಪ್ರತೀ ರವಿವಾರ ಸಾವಯವ ಸಂತೆ ನಡೆಯಲಿದೆ.
ಪ್ರಾದೇಶಿಕ ಸಾವಯವ ರೈತರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಸಾವಯವ ಪ್ರಮಾಣ ಪತ್ರ ಹೊಂದಿರುವ ಸ್ಥಳೀಯ ರೈತರು ಹಾಗೂ ಪ್ರಮಾಣಿಕರಣ ಹೊಂದಿರುವ ವ್ಯಕ್ತಿಗತ ಸಾವಯವ ರೈತರ ಗುಂಪು, ಸಂಸ್ಕರಣೆ ಸಂಸ್ಥೆ, ಅರಣ್ಯ ಉತ್ಪನ್ನಗಳು, ಮಾರಾಟಗಾರರು ಈ ಸಾವಯವ ಸಂತೆಯಲ್ಲಿ ಭಾಗವಹಿಸಲಿದ್ದಾರೆ.
ಸಾವಯವ ಉತ್ಪನ್ನಗಳಾದ ಸಾಮೆ, ನವಣೆ, ಹರಕ, ಉದಲು, ಸಜ್ಜೆ, ಬರಗು, ರಾಗಿ, ಅಕ್ಕಿ - ರಾಜಮುಡಿ, ಸಣ್ಣವಲ್ಯ, ಕೆಂಪು ಅಕ್ಕಿ (ಕುಚ್ಚಿಗೆ), ಧಾನ್ಯಗಳಾದ ಹುರುಳಿ, ಹೆಸರುಕಾಳು, ಬೆಂಗಲ್ ಕಾಳು, ಮಡಿಕೆ ಕಾಳು, ಉಪ್ಪಿನ ವಿಧಗಳಲ್ಲಿ- ಸಮುದ್ರ ಉಪ್ಪು, ರಾಕ್ ಸಾಲ್ಟ್, ಬೆಲ್ಲಗಳಾದ ಹುಡಿ ಬೆಲ್ಲ, ಬಕೆಟ್ ಬೆಲ್ಲ, ಚೌಕ ಬೆಲ್ಲ, ಇತರೆ ಉತ್ಪನ್ನಗಳಾದ- ನೆಲಕಡಲೆ, ಜೀರಿಗೆ, ಮೆಂತ್ಯೆ, ಸಾಸಿವೆ ಹಾಗೂ ಆಯಾ ಋತುಮಾನದಲ್ಲಿ ಲ್ಯವಿರುವ ಸ್ಥಳೀಯ ಸಾವಯವ ಹಣ್ಣು ಮತ್ತು ತರಕಾರಿಗಳು ಸಂತೆಯಲ್ಲಿ ಲಭ್ಯವಿರುತ್ತವೆ ಎಂದು ಉಡುಪಿ ಜಿಲ್ಲಾ ತೋಟಗಾರಿಕೆ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತೆಯಲ್ಲಿ ಮಾರಾಟ ಮಾಡಲು ಆಸಕ್ತಿ ಹೊಂದಿರುವ ಹಾಗೂ ಪ್ರಮಾಣ ಪತ್ರ ಹೊಂದಿರುವ ರೈತರು ತಮ್ಮ ಹೆಸರನ್ನು ಉಡುಪಿಯ ತೋಟಗಾರಿಕಾ ಮಾಹಿತಿ ಕೇಂದ್ರದಲ್ಲಿ (ದೂರಾವಾಣಿ:0820-2520590) ನೊಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.