×
Ad

ಸರಕಾರಿ ಬಸ್‌ಗಳು ನಿಯಮ ಪಾಲಿಸಲಿ: ಜಿಲ್ಲಾಧಿಕಾರಿ ಪ್ರಿಯಾಂಕ

Update: 2017-06-07 21:32 IST

ಉಡುಪಿ, ಜೂ.7: ಉಡುಪಿ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಹೊಸದಾಗಿ ಪರವಾನಿಗೆ ಪಡೆದಿರುವ ಸರಕಾರಿ ಬಸ್‌ಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನೀಡಿದ ಸಮಯದ ಪ್ರಕಾರವೇ ಸಂಚರಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಖಾಸಗಿ ಬಸ್ ಮಾಲಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಕೆಎಸ್ ಆರ್‌ಟಿಸಿ ಅಧಿಾರಿಗಳಿಗೆ ಈ ರೀತಿ ಸೂಚನೆ ನೀಡಿದರು.

ಹೊಸದಾಗಿ ಪರವಾನಿಗೆ ಪಡೆದಿರುವ ಹೊನ್ನಾಳ- ಉಡುಪಿ ಮಾರ್ಗದ ಸರಕಾರಿ ಬಸ್‌ಗಳು ನಿಗದಿತ ಅವಧಿಯಲ್ಲಿ ಸಂಚರಿಸದ ಪರಿಣಾಮ ಖಾಸಗಿ ಬಸ್‌ಗಳು ನಷ್ಟಕ್ಕೆ ಒಳಗಾಗುತ್ತಿವೆ ಎಂದು ಬಸ್ ಮಾಲಕಿ ರಾಧದಾಸ್ ದೂರಿ ದರು. ಇದಕ್ಕೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿ ಜೈಶಾಂತ್, ಈ ಕುರಿತು ಚಾಲಕರಿಗೆ ಸೂಚನೆ ನೀಡಿದ್ದೇವೆ ಎಂದರು.

ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮಾತನಾಡಿ, ಮಣಿಪಾಲದಲ್ಲಿ ನರ್ಮ್ ಬಸ್‌ಗಳಿಗೆ ನಿಗದಿ ಪಡಿಸಿರುವ ಬಸ್ ನಿಲ್ದಾಣಕ್ಕೆ ಬಸ್‌ಗಳು ತೆರಳದೆ ಖಾಸಗಿ ಬಸ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ದೂರಿದರು. ಗೋಳಿಯಂಗಡಿ ಮಾರ್ಗದ ಸರಕಾರಿ ಬಸ್‌ಗಳು ಟ್ರಿಪ್ ಕಡಿತ ಮಾಡುತ್ತದೆ ಮತ್ತು ಸಮಯ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದು ಮಾಲಕ ಸುರೇಂದ್ರ ಶೆಟ್ಟಿ ಆರೋಪಿಸಿದರು.

ಸರಕಾರಿ ಬಸ್‌ಗಳು ಖಾಸಗಿ ಜೊತೆ ಪೈಪೋಟಿಗೆ ಇಳಿಯುತ್ತಿವೆ. ಖಾಸಗಿ ಬಸ್‌ಗಳ ಮುಂದೆಯೇ ಸರಕಾರಿ ಬಸ್ ಹೋಗುತ್ತದೆ. ತೆರಿಗೆ, ವಿಮೆ ಪಾವತಿಸುವ ನಮಗೆ ಬಸ್ ನಡೆಸುವುದು ಕಷ್ಟ ವಾಗುತ್ತಿದೆ ಎಂದು ಸುಧಾಕರ್ ಶೆಟ್ಟಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪರವಾನಿಗೆ ನೀಡಿದ ಬಳಿಕ ಸರಕಾರಿ ಬಸ್‌ಗಳಿಗೆ ವಿಶೇಷ ರಿಯಾಯಿತಿ ಏನೂ ಇಲ್ಲ. ಪ್ರಾಧಿಕಾರ ನಿಗದಿ ಪಡಿಸಿದ ಸಮಯವನ್ನು ಸರಿಯಾಗಿ ಪಾಲನೆ ಮಾಡಬೇಕು. ಖಾಸಗಿಯವರಿಂದ ತುಂಬಾ ದೂರುಗಳು ಬರುತ್ತಿವೆ. ಸರಕಾರಿ ಬಸ್‌ಗಳು ಸೂಚಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಬೇಕು. ನಿಯಮಗಳ ಉಲ್ಲಂಘನೆ ಮಾಡಬಾರದು. ಈ ಕುರಿತು ಸರಕಾರಿ ಬಸ್‌ಗಳ ಚಾಲಕ ನಿರ್ವಾಹಕರಿಗೆ ಸರಿಯಾದ ಸೂಚನೆಯನ್ನು ನೀಡ ಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸರಕಾರಿ ಬಸ್‌ಗಳು ಸಮಯ ಪಾಲನೆ ಮತ್ತು ನಿಗದಿತ ಮಾರ್ಗದಲ್ಲಿ ಸಂಚರಿಸದ ಕುರಿತು ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲ. ನಿಯಮಗಳನ್ನು ಪಾಲನೆ ಮಾಡುವಂತೆ ಘಟಕದ ಎಲ್ಲಾ ಚಾಲಕ ನಿರ್ವಾಹಕ ರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಸರಕಾರಿ ಬಸ್ ಸಂಚಾರ ಆರಂಭಗೊಂಡಿರುವುದರಿಂದ ಕೆಲವು ಕಡೆ ಗೊಂದಲಗಳು ಆಗಿವೆ. ವಾರ ದೊಳಗೆ ಎಲ್ಲವನ್ನು ಸರಿಪಡಿಸಲಾಗುವುದು ಎಂದು ಅಧಿಕಾರಿ ಜೈಶಾಂತ್ ತಿಳಿಸಿದರು.

ಆಗುಂಬೆ ಘಾಟ್‌ನಲ್ಲಿ ಸರಕಾರಿ ಬಸ್ ಮತ್ತು ಖಾಸಗಿ ಬಸ್‌ಗಳು ಪೈಪೋಟಿ ಯಿಂದ ಚಲಿಸುತ್ತಿವೆ. ಅಪಾಯಕಾರಿ ತಿರುವುಗಳಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳು ವಂತೆ ಶೃಂಗೇರಿಯ ಲಕ್ಷ್ಮಿನಾರಾಯಣ ಭಟ್ ಮನವಿ ಮಾಡಿದರು.

ರಾತ್ರಿ ವೇಳೆಯಲ್ಲಿ ಖಾಸಗಿ ಬಸ್‌ಗಳನ್ನು ನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ನಿಲ್ಲಿಸಬಾರದು. ಇದಕ್ಕೆ ಸಾರ್ವಜನಕರಿಂದ ತುಂಬಾ ದೂರುಗಳು ಬರುತ್ತಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಕುಲಕರ್ಣಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News