ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 21 ಜನರ ಸಾವು,14 ಜನರಿಗೆ ಗಾಯ

Update: 2017-06-07 16:03 GMT

ಭೋಪಾಲ,ಜೂ.7: ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಾಲಾಘಾಟ್ ಜಿಲ್ಲೆಯಲ್ಲಿನ ಪರವಾನಿಗೆ ಹೊಂದಿದ್ದ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಬುಧವಾರ ಭಾರೀ ಸ್ಫೋಟ ಸಂಭವಿಸಿದೆ. ಮಹಿಳೆಯರೂ ಸೇರಿದಂತೆ ಕನಿಷ್ಠ 21 ಜನರು ಸಜೀವ ದಹನಗೊಂಡಿದ್ದು, ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿವೆ. 14 ಜನರಿಗೆ ತೀವ್ರ ಸುಟ್ಟಗಾಯಗಳಾಗಿವೆ.

ಖೈರಿಗ್ರಾಮದ ಕಾಡುಪ್ರದೇಶದಲ್ಲಿರುವ ವಾರ್ಸಿ ಪಟಾಕಾ ದುಕಾನ್‌ನಲ್ಲಿ ಈ ದುರಂತ ಸಂಭವಿಸಿದೆ. ಗಾಯಾಳುಗಳ ಪೈಕಿ 11 ಜನರನ್ನು ಬಾಲಾಘಾಟ್ ಜಿಲ್ಲಾಸ್ಪತ್ರೆಗೆ ಮತ್ತು ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಮೂವರನ್ನು ನೆರೆಯ ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಮತ್ತು ಗಾಯಾಳುಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯ ಸರಕಾರವು ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ.ಪರಿಹಾರವನ್ನು ಪ್ರಕಟಿಸಿದೆ.

ಮಧ್ಯಾಹ್ನ 3:30ರ ಸುಮಾರಿಗೆ ತೀವ್ರ ಬಿಸಿಯಿಂದಾಗಿ ದಾಸ್ತಾನಿರಿಸಿದ್ದ ಪಟಾಕಿಗಳಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡಿದ್ದು ಈ ದುರಂತಕ್ಕೆ ಕಾರಣವಾಗಿತ್ತು ಎಂದು ಬಾಲಾಘಾಟ್ ಎಸ್‌ಪಿ ಅಮಿತ್ ಸಾಂಘಿ ಅವರು ತಿಳಿಸಿದರು. ದೊಡ್ಡ ಹಾಲ್‌ನೊಳಗೆ ಇದ್ದ ಗೋದಾಮು ಸ್ಫೋಟದ ಬಳಿಕ ಸಂಪೂರ್ಣವಾಗಿ ನೆಲಕಚ್ಚಿದೆ.

ರಾತ್ರಿಯವರೆಗೆ 21 ಶವಗಳನ್ನು ಹೊರತೆಗೆಯಲಾಗಿದೆ. ಇನ್ನಷ್ಟು ಶವಗಳು ಪತ್ತೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಸಾಂಘಿ ತಿಳಿಸಿದರು.
ಇದೊಂದು ಆಕಸ್ಮಿಕ ಘಟನೆಯಾಗಿದೆ ಮ್ತು ನಕ್ಸಲ್ ಕೈವಾಡವಿರುವಂತೆ ಕಂಡು ಬರುತ್ತಿಲ್ಲ ಎಂದು ಪ್ರಾಥಮಿಕ ತನಿಖೆಯು ಬೆಟ್ಟು ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News