×
Ad

ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕ ಸಂಘದಿಂದ ಮನವಿ

Update: 2017-06-07 21:53 IST

ಪುತ್ತೂರು, ಜೂ. 7: ಪುತ್ತೂರು ತಾಲೂಕಿನಲ್ಲಿ ಈಗಾಗಲೇ ಸುಮಾರು 4,500 ರಿಕ್ಷಾಗಳು ಓಡಾಟ ನಡೆಸುತ್ತಿದ್ದು, ಹೊಸ ರಿಕ್ಷಾಗಳಿಗೆ ಪರವಾನಿಗೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿ ಪುತ್ತೂರಿನ ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಬುಧವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಪುತ್ತೂರು ತಾಲೂಕಿನಲ್ಲಿ ಸುಮಾರು 4,500 ರಿಕ್ಷಾಗಳಿದ್ದು, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲೇ ಸುಮಾರು 2 ಸಾವಿರ ರಿಕ್ಷಾಗಳು ಓಡಾಡುತ್ತಿವೆ. ಪುತ್ತೂರು ನಗರದಲ್ಲಿ ಕೇವಲ 28 ಕಡೆಗಳಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆಯಿದ್ದು, 7 ಅಥವಾ 8 ರಿಕ್ಷಾಗಳಂತೆ 224 ರಿಕ್ಷಾಗಳನ್ನು ಮಾತ್ರ ಪಾರ್ಕಿಂಗ್ ಮಾಡಲು ಅವಕಾಶವಿರುತ್ತದೆ. ಉಳಿದ 1776 ರಿಕ್ಷಾಗಳನ್ನು ನಿಲುಗಡೆ ಮಾಡಲು ನಗರಸಭೆಯ ವ್ಯಾಪ್ತಿಯಲ್ಲಿ ಎಲ್ಲಿಯೂ ಜಾಗ ಇರುವುದಿಲ್ಲ. ಪರಿಸ್ಥಿತಿ ಹೀಗಿದ್ದರೂ ಪುತ್ತೂರಿನ ಆರ್‌ಟಿಒ ಕಚೇರಿಯಲ್ಲಿ ಈಗಲೂ ಹೊಸ ರಿಕ್ಷಾಗಳಿಗೆ ಪರವಾನಿಗೆ ನೀಡಲಾಗುತ್ತಿದೆ. ಇದರಿಂದಾಗಿ ರಿಕ್ಷಾವನ್ನೇ ನಂಬಿ ಬದುಕುತ್ತಿರುವ ನಾವು ತೀರಾ ತೊಂದರೆ ಅನುಭವಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಾಲೂಕಿನ ಗ್ರಾಮಾಂತರ ಪ್ರದೇಶದ ರಿಕ್ಷಾಗಳಿಗೂ ತಾಲೂಕು ಪರವಾನಿಗೆ ನೀಡಲಾಗುತ್ತಿರುವುದರಿಂದ ಅವರು ನಗರದಲ್ಲೇ ಬಾಡಿಗೆ ಮಾಡುತ್ತಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯ ರಿಕ್ಷಾಗಳಿರುವ ತಾಲೂಕಿನಲ್ಲಿ ಹೊಸ ರಿಕ್ಷಾಗಳಿಗೆ ಈಗಲೂ ಪರವಾನಿಗೆ ನೀಡುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಯ ಕುರಿತು ಸಂಘಟನೆಯ ವತಿಯಿಂದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು , ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿನ ಸಮಸ್ಯೆಗೆ ಯಾರೂ ಈ ತನಕ ಸ್ಪಂದಿಸಿಲ್ಲ. ಇನ್ನೂ ತಾಲ್ಲೂಕಿನಲ್ಲಿ ರಿಕ್ಷಾಗಳಿಗೆ ಪರವಾನಿಗೆ ನೀಡಿದಲ್ಲಿ ಕೃಷಿ ಸಾಲ ಪಾವತಿಸಲು ಸಾಧ್ಯವಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡಂತೆ ಬ್ಯಾಂಕ್ ಸಾಲ ಪಾವತಿಸಲು ಸಾಧ್ಯವಾಗದೆ ರಿಕ್ಷಾ ಚಾಲಕರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಅವರು ಮನವಿಯಲ್ಲಿ ಎಚ್ಚರಿಸಲಾಗಿದೆ.
 

ಪುತ್ತೂರು ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ,ಕಾರ್ಯದರ್ಶಿ ಮಹೇಶ್ ಪ್ರಭು ಮಣಿಯ, ಖಜಾಂಜಿ ವಿಕ್ರಂ , ಜಿಲ್ಲಾ ಮೋಟಾರು ಮತ್ತು ಮಜ್ದೂರ್ ಸಂಘದ ಕಾರ್ಯದರ್ಶಿ ಮೋಹನ್ ಹೆಗ್ಡೆ, ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಮಾಜಿ ಅ ಗೌರವಾಧ್ಯಕ್ಷ ದೇವಪ್ಪ ಗೌಡ , ಮಾಜಿ ಅಧ್ಯಕ್ಷರಾದ ರಂಜನ್, ನಾರಾಯಣ ಗೌಡ,ಶಿವಪ್ಪ ಪೂಜಾರಿ, ಜಿ.ಹುಸೈನ್, ಸಂಘಟನೆಯ ಪ್ರಮುಖರಾದ ಗಣೇಶ್ ಜೋಗಿ,ಶ್ರೀನಿವಾಸ ರೈ ಒಳತ್ತಡ್ಕ, ಕಿಟ್ಟಣ್ಣ ರೈ, ನವೀನ್ ಕುಮಾರ್, ಸದಾನಂದ ,ಆನಂದ ರೈ,ವೀರಪ್ಪ ಪೂಜಾರಿ, ಮನೋಹರ್ , ಕೇಶವ ಮತ್ತಿತರರು ಮನವಿ ಸಲ್ಲಿಸುವ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News