×
Ad

ಪುತ್ತೂರು ಎಪಿಎಂಸಿ: ಅಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಅವಿರೋಧ ಆಯ್ಕೆ

Update: 2017-06-07 21:58 IST

ಪುತ್ತೂರು, ಜೂ. 7: ಪುತ್ತೂರು ತಾಲೂಕು ಕೃಷಿ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಅಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಉಪಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬುಧವಾರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
 ಪುತ್ತೂರು ಎಪಿಎಂಸಿಯ 13 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಬೆಪಿ ಬೆಂಬಲಿತರು 11 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹಮತ ಪಡೆದಿದ್ದರು. ಕಾಂಗ್ರೆಸ್ ಬೆಂಬಲಿತರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.

ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪುತ್ತೂರು ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಬಿಜೆಪಿಯ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೆಲ್ಯಾಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಬಾಲಕೃಷ್ಣ ಜಾಣಜಾಲು ಅವರು ನಾಮಪತ್ರ ಸಲ್ಲಿಸಿರುವುದರಿಂದ ಅವರಿಬ್ಬರು ಅವಿರೋಧವಾಗಿ ಆಯ್ಕೆಗೊಂಡರು.

ಪುತ್ತೂರು ತಹಶೀಲ್ದಾರ್ ಅನಂತಶಂಕರ್ ಅವರು ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಬೂಡಿಯಾರ್ ರಾಧಾಕೃಷ್ಣ ರೈ ಅವರು ಜೆ.ಎಚ್.ಪಠೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡು 1996ರಿಂದ 99ರ ತನಕದ ಮೂರು ವರ್ಷಗಳ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.

ಜಿಲ್ಲಾ ಮಟ್ಟದಲ್ಲಿ ಉತ್ತಮ ಬತ್ತದ ಕೃಷಿಕ, ಉತ್ತಮ ಹೈನುಗಾರಿಕೆ ಮತ್ತು ಉತ್ತಮ ಆಡು ಸಾಕಾಣಿಕೆ ಪ್ರಶಸ್ತಿ ಪಡೆದುಕೊಂಡಿರುವ ಅವರಿಗೆ ಇದೀಗ ಎಡನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ.

ಬೂಡಿಯಾರ್ ರಾಧಾಕೃಷ್ಣ ರೈ ಅವರು 1992ರಿಂದ 2007ರ ತನಕ 15 ವರ್ಷಗಳ ಕಾಲ ಆರ್ಯಾಪು ಸಿಎ ಬ್ಯಾಂಕ್ ಅಧ್ಯಕ್ಷರಾಗಿ, 2004ರಿಂದ 2009ರ ತನಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ, 2000ದಿಂದ 2010ರ ತನಕ ಮಾಸ್ ಸಂಸ್ಥೆಯ ನಿರ್ದೇಶಕರಾಗಿ, ಈ ಹಿಂದೆ ಮೂರು ವರ್ಷಗಳ ಕಾಲ ಎಪಿಎಂಸಿಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

1980ರಿಂದ 2008ರ ತನಕ 28 ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬೂಡಿಯಾರ್ ರಾಧಾಕೃಷ್ಣ ರೈ ಅವರು ತಾಲ್ಲೂಕು ಅಧ್ಯಕ್ಷ ಸ್ಥಾನ, ಜಿಲ್ಲಾ ಕಾರ್ಯದರ್ಶಿ, ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ, ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದರು. 2008ರ ಬಳಿಕ ಜೆಡಿಎಸ್ ತೊರೆದು ಬಿಜೆಪಿಯಲ್ಲಿ ಸಕ್ರೀಯಗೊಂಡಿದ್ದ ಅವರು ಬಿಜೆಪಿ ತಾಲ್ಲೂಕು ಕಿಸಾನ್ ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಇದೀಗ ಬಿಜೆಪಿ ಜಿಲ್ಲಾ ಹೈನುಗಾರರ ಘಟಕದ ಸಂಚಾಲಕರಾಗಿದ್ದಾರೆ.

ಕುರಿಯ ಉಳ್ಳಾಲ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ, ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು,  ಕೌಕ್ರಾಡಿ ಗ್ರಾಮ ಪಂ. ಸದಸ್ಯರಾಗಿ, ಅಧ್ಯಕ್ಷರಾಗಿ, ನೆಲ್ಯಾಡಿ ಕ್ಷೇತ್ರದ ಜಿಲ್ಲಾ ಪಂ. ಸದಸ್ಯರಾಗಿ, ಜಿಲ್ಲಾ ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬಾಲಕೃಷ್ಣ ಜಾಣಜಾಲು ಅವರು ಮೊದಲ ಬಾರಿಗೆ ಎಪಿಎಂಸಿ ಪ್ರವೇಶಿಸಿದ್ದು, ಆರಂಭದಲ್ಲಿಯೇ ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮಾತನಾಡಿದ ಬೂಡಿಯಾರ್ ರಾಧಾಕೃಷ್ಣ ರೈ ಅವರು ತನ್ನ ಹಿಂದಿನ ಅಧ್ಯಕ್ಷಾವಧಿಯಲ್ಲಿ ಎಪಿಎಂಸಿ ಪ್ರಾಂಗಣಕ್ಕೆ ವ್ಯಾಪಾರ ಸ್ಥಳಾಂತರಿಸುವ ಪ್ರಯತ್ನ ನಡೆಸಿದ್ದೆ. ಇದೀಗ ಎರಡನೇ ಬಾರಿಗೆ ಅಧ್ಯಕ್ಷನಾಗಿರುವ ತಾನು ಎಲ್ಲಾ ವರ್ತಕರಿಗೆ ಹಾಗೂ ರೈತರಿಗೆ ಎಪಿಎಂಸಿಯಿಂದ ಸಿಗುವ ಎಲ್ಲಾ ರೀತಿಯ ಸಹಕಾರ ನೀಡುವ ಜೊತೆಗೆ ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದರು.

ನಾವು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಎಪಿಎಂಸಿಯಿಂದ ಏನೆಲ್ಲಾ ಅನುಕೂಲತೆಗಳನ್ನು ಒದಗಿಸಿಕೊಡಲು ಸಾಧ್ಯವೋ, ಅವೆಲ್ಲವನ್ನೂ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು ಮನವಿ ಮಾಡಿದರು.

ಎಪಿಎಂಸಿ ಸದಸ್ಯರಾದ ಶಕೂರ್ ಹಾಜಿ, ಪುಲಸ್ತ್ಯಾ ರೈ ಅವರು ಮಾತನಾಡಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಸಹಿತ ಬಿಜೆಪಿ ಮುಖಂಡರು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು, ಎಪಿಎಂಸಿ ಕಾರ್ಯನಿರ್ವಹಣಾಧಿರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News