ಒತ್ತಿನೆಣೆ ಗುಡ್ಡ ಕುಸಿತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ
ಬೈಂದೂರು ಜೂ.7: ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಯ ಪರಿಣಾಮ ಇಂದು ಬೆಳಗಿನ ಜಾವ 5:30ರ ಸುಮಾರಿಗೆ ಒತ್ತಿನಣೆ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ 66ರ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆಯಿತು.
ಪುಣೆಯ ಐಆರ್‌ಬಿ ಕಂಪೆನಿಯು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಿತ್ತು. ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಜೆಡಿ ಮಣ್ಣಿ ನಿಂದ ಆವೃತವಾದ ಗುಡ್ಡವು ರಸ್ತೆಯ ಮೇಲೆ ಕುಸಿದು ಬಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ವಾಹನ ಚಾಲಕರು ಪರದಾಡುವಂತಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೈಂದೂರು ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಸಂಬಂಧಪಟ್ಟ ಹೆದ್ದಾರಿ ಕಂಪೆನಿಗಳಿಗೆ ಮಾಹಿತಿ ನೀಡಿ ಐಆರ್‌ಬಿ ಹಾಗೂ ಸ್ಥಳೀಯ ಒಟ್ಟು ಮೂರು ಜೆಸಿಬಿ ಹಾಗೂ ಟಿಪ್ಪರ್ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಎರಡು ಬದಿಗಳಲ್ಲಿ ಸುಮಾರು 4ರಿಂದ 5 ಕಿ.ಮಿ. ತನಕ ವಾಹನಗಳು ರಸ್ತೆಯಲ್ಲೇ ಸಾಲು ಗಟ್ಟಿ ನಿಂತಿರುವ ದೃಶ್ಯ ಕಂಡುಬಂದವು. ಇದರಿಂದ ಭಟ್ಕಳ ಕಡೆಯಿಂದ ಬರುತ್ತಿರುವ ಮತ್ತು ತೆರಳುತ್ತಿರುವ ಬಸ್‌ಗಳ ಪ್ರಯಾಣಿಕರು ಸೇರಿದಂತೆ ನೂರಾರು ವಾಹನಗಳ ಚಾಲಕರು ತೀರಾ ತೊಂದರೆ ಅನುಭವಿಸಿದರು. ನಿರಂತರ ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಳಗ್ಗೆ 7:30ರ ಸುಮಾರಿಗೆ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್ ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸಿದರು. ‘
ಇನ್ನು ಮುಂದೆ ಈ ರೀತಿಯ ಘಟನೆ ಸಂಭವಿಸಿದಾಗ ಪರ್ಯಾಯವಾಗಿ ಶಿರೂರು- ದಂಬೆ- ಬೈಂದೂರು ರಸ್ತೆ ಮತ್ತು ಬೈಂದೂರು ರೈಲ್ವೆ ನಿಲ್ದಾಣದ ಬಳಿಯಿಂದ ಶಿರೂರುಗೆ ಹೋಗುವ ರಸ್ತೆಯನ್ನು ಬಳಸಿಕೊಳ್ಳಲು ಸೂಚಿಸ ಲಾಯಿತು. ಅದೇ ರೀತಿ ಮುಂದೆ ಗುಡ್ಡ ಕುಸಿಯದಂತೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಕಂಪೆನಿಗೆ ನಿರ್ದೇಶನ ನೀಡಲಾಯಿತು. ಮುಂದೆ ಇಂತಹ ಘಟನೆ ಸಂಭವಿಸಿದಾಗ ಕೂಡಲೇ ತೆರವು ಕಾರ್ಯಾಚರಣೆ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಈ ಭಾಗದಲ್ಲಿ ಎರಡು ಜೆಸಿಬಿ ಮತ್ತು ಟಿಪ್ಪರ್‌ಗಳನ್ನು ನಿಯೋಜಿಸಬೇಕೆಂದು ಎಸಿಯವರು ಗುತ್ತಿಗೆದಾರರಿಗೆ ಸೂಚಿಸಿದರು’ ಎಂದು ತಹಶೀಲ್ದಾರ್ ಕಿರಣ್ ಗೊರಯ್ಯ ತಿಳಿಸಿದರು.