×
Ad

ಬಾರ್ಜ್: ಇಂಧನ ತೆರವು ಯತ್ನ ವಿಫಲ

Update: 2017-06-07 22:24 IST

ಮಂಗಳೂರು, ಜೂ. 7: ಸಮುದ್ರದಲ್ಲಿ ದುರಂತಕ್ಕೀಡಾಗಿರುವ ಬಾರ್ಜ್‌ನಿಂದ ಇಂಧನ ತೆರವುಗೊಳಿಸಲು ನೌಕಾ ಪಡೆ ಮತ್ತು ತಾಂತ್ರಿಕ ತಜ್ಞರ ತಂಡವು ನಡೆಸಿದ ಪ್ರಯತ್ನವು ವಿಫಲಗೊಂಡಿದೆ. 24 ಗಂಟೆಯೊಳಗೆ ಬಾರ್ಜ್‌ನಿಂದ ಇಂಧನ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಜಗದೀಶ್ ಮಂಗಳವಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ನೌಕಾ ಪಡೆ ಮತ್ತು ತಾಂತ್ರಿಕ ತಜ್ಞರ ತಂಡವು ಬುಧವಾರ ಬಾರ್ಜ್‌ನಿಂದ ಇಂಧನ ತೆರವುಗೊಳಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.

ಬಾರ್ಜ್‌ನಿಂದ ಇಂಧನ ತೆರವುಗೊಳಿಸಲು ಸಾಧ್ಯವಾಗದಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಮಳೆ ಕಡಿಮೆಯಾಗಿದ್ದರೂ ಸಮುದ್ರದ ಅಲೆಗಳ ಅಬ್ಬರ ತೀವ್ರವಾಗಿದ್ದರಿಂದ ತಂಡಕ್ಕೆ ಬಾರ್ಜ್‌ನಿಂದ ಇಂಧನವನ್ನು ಖಾಲಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

ಮುಳುಗುತ್ತಿರುವ ಬಾರ್ಜ್‌: ಸಮುದ್ರದಲ್ಲಿ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ವಾಲಿಕೊಂಡಿದ್ದ ಬಾರ್ಜ್ ಬುಧವಾರ ಇನ್ನೂ ಹೆಚ್ಚು ವಾಲಿಕೊಂಡಂತೆ ಕಂಡುಬಂದಿದ್ದು, ಮುಳುಗುವ ಭೀತಿಯನ್ನು ಎದುರಿಸುತ್ತಿದೆ. ಮಂಗಳವಾರ ಕಳಚಲ್ಪಟ್ಟ ಬಾರ್ಜ್‌ನ ಬಿಡಿಭಾಗವನ್ನು ಇಂದು ಕ್ರೇನ್ ಮೂಲಕ ಸಮುದ್ರ ದಡದ ಮೇಲೆ ಹಾಕಲಾಗಿದೆ.

ಇಂಧನ ಸೋರಿಕೆಯ ಶಂಕೆ: ಮುಳುಗುತ್ತಿರುವ ಬಾರ್ಜ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಕಿನಾರೆ ಸೇರುತ್ತಿರುವ ಸಮುದ್ರ ನೀರು ಇಂಧನ ಮಿಶ್ರಿತವಾಗಿದ್ದು, ಈ ಹಿನ್ನೆಲೆಯಲ್ಲಿ ಬಾರ್ಜ್‌ನಿಂದ ಇಂಧನ ಸೋರಿಕೆಯಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News