×
Ad

ಮುಳುಗುತ್ತಿದೆ ಬಾರ್ಜ್: ಇನ್ನೂ ಆಗಿಲ್ಲ ಇಂಧನ ತೆರವು!

Update: 2017-06-08 19:25 IST

ಮಂಗಳೂರು, ಜೂ.8: ಉಳ್ಳಾಲ ಸಮುದ್ರ ತೀರದಿಂದ 1.6 ಕಿ.ಮೀ. ದೂರದಲ್ಲಿ ಜೂ. 3ರಂದು ಸಮುದ್ರದ ಅಲೆಗಳ ಅಬ್ಬರಕ್ಕೆ ದುರಂತಕ್ಕೀಡಾಗಿರುವ ಬಾರ್ಜ್ ದಿನದಿಂದ ದಿನಕ್ಕೆ ಸಮುದ್ರದ ಆಳಕ್ಕೆ ಇಳಿಯುತ್ತಿದ್ದು, ಬಾರ್ಜ್‌ನಲ್ಲಿರುವ ಇಂಧನ ತೆರವು ಕಾರ್ಯ ಮಾತ್ರ ಇ್ನೂ ಪರಿಶೀಲನೆಯ ಹಂತದಲ್ಲೇ ಇದೆ.

ಇಂದು ಕೂಡಾ ಸಿಂಗಾಪುರ, ಫಿಲಿಫೈನ್ಸ್‌ನ ತಂತ್ರಜ್ಞರು ಬಾರ್ಜ್‌ನತ್ತ ತೆರಳಿ ಪರಿಶೀಲನೆ ನಡೆಸಿ ಹಿಂತಿರುಗಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆಗೆ ಕಡಲಲ್ಲಿ ಅಲೆಗಳ ಅಬ್ಬರ ಸಾಕಷ್ಟು ಕಡಿಮೆಯಾಗಿತ್ತು. ಈ ಸಂದರ್ಭ ನೌಕೆಯಲ್ಲಿ ಬಂದ ಅಧಿಕಾರಿಗಳು ತಪಾಸಣೆ ನಡೆಸಿ ಹಿಂತಿರುಗಿದರು. ಮಧ್ಯಾಹ್ನ 2 ಗಂಟೆಗೆ ತಣ್ಣೀರುಬಾವಿಯ ಕೋಸ್ಟ್‌ಗಾರ್ಡ್ ಕಚೇರಿ ಮೂಲಕವಾಗಿ ನೌಕೆಯಲ್ಲಿ ಬಂದ ತಂತ್ರಜ್ಞರು, ಬಾರ್ಜ್‌ಗೆ ಸುತ್ತು ಹಾಕಿ ಪರಿಶೀಲಿಸಿ ಕೆಲ ಹೊತ್ತಿನಲ್ಲೇ ವಾಪಾಸು ಹೋಗಿದ್ದಾರೆ.

ಬಾರ್ಜ್‌ನ ಅರ್ಧಕ್ಕೂ ಅಧಿಕ ಭಾಗ ನೀರಿನೊಳಗೆ ಮುಳುಗಿ ಹೋಗಿರುವುದರಿಂದ ಇದ್ದ ಸ್ಥಿತಿಯಲ್ಲಿಯೇ ಬಾರ್ಜ್ ತೆರವು ಕಷ್ಟ ಸಾಧ್ಯ ಎನ್ನಲಾಗಿದೆ. ಈ ಬಗ್ಗೆ ತಂತ್ರಜ್ಞರು ಎರಡು ದಿನದೊಳಗೆ ವರದಿಯೊಂದನ್ನು ತಯಾರಿಸಿ ಜಿಲ್ಲಾಡಳಿತ ಮತ್ತು ಬಾರ್ಜ್ ಕಂಪನಿಗೆ ನೀಡಲಿದ್ದಾರೆಂದು ಹೇಳಲಾಗಿದೆ.

ಬಾರ್ಜ್ ಮುಳುಗಿದರೆ ಅಪಾಯ ತಪ್ಪಿದ್ದಲ್ಲ!

ಅವಘಡ ಸಂಭವಿಸಿದ ದಿನದಂದು (ಕಳೆದ ಶನಿವಾರ) ಬಾರ್ಜ್ ಸಮುದ್ರದ ನೀರ ಮೇಲೆಯೇ ಇದ್ದಂತೆ ದೂರದಲ್ಲಿ ಕಾಣುತ್ತಿತ್ತು. ಆದರೆ ಇಂದು ಬಾರ್ಜ್‌ನ ಒಂದು ಭಾಗ ಮಾತ್ರ ಗೋಚರಿಸುತ್ತಿದ್ದು, ದಿನದಿಂದ ದಿನಕ್ಕೆ ಬಾರ್ಜ್ ಸಮುದ್ರ ಒಡಲಾಳಕ್ಕೆ ಇಳಿಯುತ್ತಿರುವಂತೆ ಗೋಚರಿಸುತ್ತಿದೆ. ಘಟನೆ ಸಂಭವಿಸಿ ಐದು ದಿನಗಳ ಬಳಿಕವೂ ಬಾರ್ಜ್ ತೆರವು ಕಾರ್ಯಾಚರಣೆ ಮಾತ್ರವಲ್ಲದೆ, ಅದರಲ್ಲಿರುವ ಇಂಧನವನ್ನು ತೆರವುಗೊಳಿಸುವ ಯತ್ನ ನಡೆಯದಿರುವುದು ಸ್ಥಳೀಯ ಜನರನ್ನು ತೀವ್ರ ಆತಂಕ್ಕೀಡು ಮಾಡಿದೆ. ಬಾರ್ಜ್ ಮುಳುಗಡೆಯಾದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಲಿದೆ. ಮಾತ್ರವಲ್ಲದೆ, ಬಾರ್ಜ್‌ನ ಅವಶೇಷಗಳಿಂದ ಜಲಚರಗಳಿಗೆ ಹಾನಿಯಾಗುವ ಜತೆಯಲ್ಲೇ, ಮುಂದೆ ಮೀನುಗಾರಿಕೆಗೆ ತೆರಳುವ ದೋಣಿಗಳಿಗೂ ಬಾಧಕವಾಗಿ ಪರಿಣಮಿಸುವ ಭೀತಿ ಸ್ಥಳೀಯ ಮೀನುಗಾರನ್ನು ಕಾಡುತ್ತಿದೆ.

ಜಿಲ್ಲಾಧಿಕಾರಿ ಆದೇಶಕ್ಕೂ ಸಿಗದ ಬೆಲೆ!

ಬಾರ್ಜ್‌ನಲ್ಲಿರುವ ಇಂಧನವನ್ನು 24 ಗಂಟೆಯೊಳಗೆ ತೆರವು ಮಾಡುವಂತೆ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಬಾರ್ಜ್ ಕಂಪನಿ ಹಾಗೂ ಎಡಿಬಿ ಅಧಿಕಾರಿಗಳಿಗೆ ಹೇಳಿದ್ದರೂ, ಗಡು ನೀಡಿ 48 ಗಂಟೆಯಾದರೂ ಇಂಧನ ಮಾತ್ರ ತೆಗೆದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತ ಬಾರ್ಜ್‌ನ ಕೆಲ ಬಿಡಿಭಾಗಗಳು ಮೊಗವೀರ ಪಟ್ಣ ಸಮೀಪ ಕಡಲ ತೀರ ಸೇರಿತ್ತು. ಅವುಗಳಲ್ಲಿ ಒಂದಾದ ದೊಡ್ಡದಾದ ರೆಫ್ರಿಜರೇಟರ್ ಇಂದು ಅವಶೇಷದ ರೂಪದಲ್ಲಿತ್ತು. ಅದನ್ನು ಕಡಲ ತೀರಕ್ಕೆ ಬರುವವರು ಆಶ್ಚರ್ಯದಿಂದ ವೀಕ್ಷಿಸುತ್ತಿದ್ದಂತೆಯೇ ಕ್ರೇನ್ ಮೂಲಕ ದಡದಿಂದ ಎತ್ತಿ ಗುಜುರಿಗೆ ಸಾಗಿಸುವ ಕಾರ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News