ಬಾರ್‌ಗಳ ರಕ್ಷಣೆಗೆ ಕ್ರಮ, ನಗರಸಭೆ ಅಭಿವೃದ್ಧಿಗೆ ಹೊಡೆತ: ರಘುಪತಿ ಭಟ್‌

Update: 2017-06-08 14:28 GMT

ಉಡುಪಿ, ಜೂ.8: ಬಾರ್‌ಗಳ ರಕ್ಷಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳನ್ನಾಗಿ ಮಾರ್ಪಡಿಸುವ ಕುರಿತ ಸಚಿವ ಸಂಪುಟದ ತೀರ್ಮಾನದಿಂದ ನಗರಸಭೆಗಳ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಮದಿಂದ ರಾಜ್ಯದ ಆರು ಸಾವಿರಕ್ಕೂ ಅಧಿಕ ಬಾರ್‌ಗಳು ಮುಚ್ಚುಗಡೆಯಾಗು ವುದು ತಪ್ಪುತ್ತವೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಮುಂದೆ ಈ ರಸ್ತೆಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ಯಾವುದೇ ಉಲ್ಲೇಖವನ್ನು ಸರಕಾರ ಮಾಡಿಲ್ಲ. ಅಲ್ಲದೆ ನಿರ್ಣಯ ತೆಗೆದುಕೊಳ್ಳುವ ಮೊದಲು ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಅಭಿಪ್ರಾಯ ಪಡೆದುಕೊಂಡಿಲ್ಲ ಎಂದರು.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಲ್ಪೆ- ಕರಾವಳಿ ಜಂಕ್ಷನ್ ಮತ್ತು ಮಣಿಪಾಲ- ರಸ್ತೆಯ ಚತುಷ್ಪಥ ಕಾಮಗಾರಿಗೆ ಡಿಪಿಆರ್ ಮಂಜೂರಾಗಿದ್ದು, ರಾಜ್ಯ ಸರಕಾರದ ಈ ಕ್ರಮದಿಂದ ಈ ಅಭಿವೃದ್ಧಿ ನಿಂತು ಹೋಗಲಿದೆ. ಅದೇ ರೀತಿ ಅಂಬಲಪಾಡಿ ಜಂಕ್ಷನ್‌ನಲ್ಲಿ ಫ್ಲೈ ಓವರ್ ಮತ್ತು ಕರಾವಳಿ ಜಂಕ್ಷನ್ ಅಂಡರ್‌ಪಾಸ್ ಕಾಮಗಾರಿಗೆ ತೊಂದರೆ ಆಗಲಿದೆ. ಆದ್ದರಿಂದ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರಕಾರ ಡಿನೋಟಿಫೀಕೇಶನ್ ಆಗುವ ಮೊದಲೇ ನಗರಸಭೆಗೆ ಅನುದಾನ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಮುಂದೆ ಈ ರಸ್ತೆಯನ್ನು ನಗರಸಭೆಯೇ ನಿರ್ವಹಣೆ ಮಾಡಬೇಕಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವ ಬಾರ್‌ಗಳ ಸನ್ನದಿಯಿಂದ ರಾಜ್ಯ ಸರಕಾರಕ್ಕೆ ಬರುವ ಆದಾಯದಲ್ಲಿ ಕನಿಷ್ಠ ಶೇ.50ರಷ್ಟು ನಗರಸಭೆಗಳಿಗೆ ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳಬೇಕು. ಉಡುಪಿ ನಗರದ ಅಭಿವೃದ್ಧಿಯ ಹಿತದೃಷ್ಠಿಯಿಂದ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಬಾರ್‌ಗಳ ರಕ್ಷಣೆಗೆ ಸಚಿವ ಮಧ್ವರಾಜ್ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಯಶ್ಪಾಲ್ ಸುವರ್ಣ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News