2002ರ ನರೋಡಾ ಪಾಟಿಯಾ ನರಮೇಧ ಪ್ರಕರಣ: ದಂಗೆ ಸ್ಥಳಕ್ಕೆ ಭೇಟಿ ನೀಡಲಿರುವ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು
ಅಹ್ಮದಾಬಾದ್,ಜೂ.8: 2002ರ ನರೋಡಾ ಪಾಟಿಯಾ ನರಮೇಧ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ ಸೇರಿದಂತೆ ಆರೋಪಿಗಳ ಮೇಲ್ಮನವಿಗಳ ವಿಚಾರಣೆಯನ್ನು ನಡೆಸುತ್ತಿರುವ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ರಾದ ಹರ್ಷ ದೇವಾನಿ ಮತ್ತು ಎ.ಎಸ್. ಸುಪೆಹಿಯಾ ಅವರು ನರಮೇಧದ ಸಮಗ್ರ ಚಿತ್ರಣ ಪಡೆಯಲು ದಂಗೆ ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಈ ಪ್ರಕರಣದಲ್ಲಿ 96 ಜನರು ಗುಂಪು ಹಿಂಸೆಗೆ ಬಲಿಯಾಗಿದ್ದರು.
ಆದರೆ ಪೀಠವು ದಂಗೆ ಸ್ಥಳಕ್ಕೆ ಭೇಟಿಯ ದಿನಾಂಕ ಮತ್ತು ಸಮಯವನ್ನು ಬಹಿರಂಗಗೊಳಿಸಲಿಲ್ಲ. ಮಾಧ್ಯಮಗಳು ನ್ಯಾಯಾಧೀಶರ ಭೇಟಿಯನ್ನು ವರದಿ ಮಾಡುವು ದನ್ನು ನಿಷೇಧಿಸಿದ ಪೀಠವು, ಮಾಧ್ಯಮಗಳ ಹಸ್ತಕ್ಷೇಪವನ್ನು ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ವಿಚಾರಣೆ ಆರಂಭಗೊಂಡಾಗಿನಿಂದಲೂ ಆಯಾ ಪಕ್ಷಗಳ ವಕೀಲರು ಘಟನೆಯು ಹೇಗೆ ನಡೆದಿತ್ತು ಎನ್ನುವ ಬಗ್ಗೆ ಉತ್ತಮ ಚಿತ್ರಣ ಪಡೆಯಲು ಮತ್ತು ಪ್ರದೇಶದ ಪರಿಚಯವನ್ನು ಪಡೆಯಲು ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಈ ನ್ಯಾಯಾಲಯವನ್ನು ಕೋರಿಕೊಳ್ಳುತ್ತಿದ್ದಾರೆ.
ಅವರ ಕೋರಿಕೆಗಳು ಸಕಾರಣದಿಂದ ಕೂಡಿವೆ ಎಂದು ನ್ಯಾಯಾಲಯವು ಭಾವಿಸಿದೆ. ಹೀಗಾಗಿ ನಾವು ಸ್ಥಳಕ್ಕೆ ಭೇಟಿ ನೀಡಲು ಬಯಸಿದ್ದೇವೆ ಎಂದು ನ್ಯಾ.ದೇವಾನಿ ಮತ್ತು ನ್ಯಾ.ಸುಪೆಹಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಬುಧವಾರ ತನ್ನ ಆದೇಶದಲ್ಲಿ ಹೇಳಿದೆ.
ಗೋಧ್ರೋತ್ತರ ದಂಗೆಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಅಹ್ಮದಾಬಾದ್‌ನ ನರೋಡಾ ಪಾಟಿಯಾದಲ್ಲಿ 96 ಜನರು ಕೊಲ್ಲಲ್ಪಟ್ಟಿದ್ದು, ಹೆಚ್ಚಿನವರು ಅಲ್ಪಸಂಖ್ಯಾತರಾ ಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು 2012,ಆ.30ರಂದು ಕೊಡ್ನಾನಿ ಮತ್ತು ಇತರ 29 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಇನ್ನೋರ್ವ ಅಪರಾಧಿ ಬಾಬು ಬಜರಂಗಿಗೆ ಸಾಯುವ ತನಕ ಜೈಲುಶಿಕ್ಷೆಯನ್ನು ಘೋಷಿಸಿತ್ತು. ಕೊಡ್ನಾನಿ ಸದ್ಯ ಜಾಮೀನಿನಲ್ಲಿ ಹೊರಗಿದ್ದಾರೆ.