ವೃತ್ತಿ ಜೀವನದ ಮೊದಲ ತಿಂಗಳ ಸಂಬಳ ಆಳ್ವಾಸ್ ಶಿಕ್ಷಣ ಯೋಜನೆಗೆ

Update: 2017-06-08 14:42 GMT

ಮೂಡುಬಿದಿರೆ, ಜೂ.8 : ಯುಪಿಎಸ್‌ಸಿ ಪರೀಕ್ಷೆಗಾಗಿ ನಾನು ದಿನದ 8 ಗಂಟೆ ಅಧ್ಯಯನ ಮಾಡುತ್ತಿದ್ದೆ. ಟಾಪರ್ ಆಗುತ್ತೇನೆ ಎಂದು ನನ್ನ ಕುಟುಂಬದವರು, ಸ್ನೇಹಿತರು ಹೇಳುತ್ತಿದ್ದರೂ, ನನಗೆ 50 ರ್ಯಾಂಕ್ ಒಳಗಡೆ ಅಂಕ ಗಳಿಸುವ ನಿರೀಕ್ಷೆಯಿತ್ತು. ನಾನು ಆಳ್ವಾಸ್‌ನ ಉಚಿತ ಶಿಕ್ಷಣ ಯೋಜನೆಯ ವಿದ್ಯಾರ್ಥಿನಿಯಾಗಿದ್ದ ಕಾರಣ ಐಎಎಸ್ ವೃತ್ತಿ ಜೀವನದ ಮೊದಲ ಸಂಬಳವನ್ನು ಆಳ್ವಾಸ್‌ನ ಉಚಿತ ಶಿಕ್ಷಣ ಯೋಜನೆಗೆ ನೀಡುತ್ತೇನೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಕೆಲಸವನ್ನು ಮಾಡುತ್ತೇನೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ, ಯುಪಿಎಸ್‌ಸಿ ಟಾಪರ್ ನಂದಿನಿ ಕೆ.ಆರ್. ರ್ಹೇಳಿದರು.

ಅವರು ಕುಟುಂಬ ಸಹಿತ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರನ್ನು ಹಂಸನಗರದ ಶೋಭಾ ಅತಿಥಿಗೃಹದಲ್ಲಿ ಭೇಟಿ ಮಾಡಿನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ತಂದೆ ತಾಯಿಯ ಉದ್ದೇಶವು ನನಗೆ ಉತ್ತೇಜನ ನೀಡಿದೆ. ಬಾಲ್ಯದಿಂದಲೇ ಕನ್ನಡ ಸಾಹಿತ್ಯ ದೊಂದಿಗಿನ ಒಡನಾಟವು ಕೂಡ ಸಾಧನೆಯ ಮೇಲೆ ಪ್ರಭಾವ ಬೀರಿತು. ಕಡಿಮೆ ಸಮಯದಲ್ಲಿ ಹೇಗೆ ನಾವು ಪರೀಕ್ಷೆ ಬರೆಯಬಹುದು ಎನ್ನುವುದನ್ನೂ ಈ ಸಂದರ್ಭ ಕಲಿತೆ ಎಂದರು.

ಜನರಿಗೆ ಐಎಎಸ್, ಐಪಿಎಸ್ ಪಡೆಯುವುದಕ್ಕೆ ಬಹಳಷ್ಟು ಖರ್ಚಾಗುತ್ತದೆ. ಅಧ್ಯಯನ ಕಬ್ಬಿಣದ ಕಡಲೆ ಎನ್ನುವ ತಪ್ಪು ಕಲ್ಪನೆ ಮೊದಲು ಹೋಗಬೇಕು. ಗುರಿಯಲ್ಲಿ ಸ್ಪಷ್ಟತೆ, ಅಧ್ಯಯನದಲ್ಲಿ ಪರಿಪಕ್ವತೆಯಿದ್ದಲ್ಲಿ ಮನೆಯಲ್ಲಿ ಇದ್ದುಕೊಂಡೇ ಯುಪಿಎಸ್‌ಸಿ ಯಲ್ಲಿ ಉತ್ತಮ ಅಂಕ ಮಾಡಬಹುದು. ಶಾಲಾ ಕಾಲೇಜು ಹಂತದಲ್ಲೇ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವಂತಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿದೆ ಎಂದರು.

ನಂದಿನಿಯ ತಾಯಿ ವಿಮಲಮ್ಮ, ತಂದೆ ಕೆ.ವಿ ರಮೇಶ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಈ ಸಂದರ್ಭದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News