ಗೋಹತ್ಯೆ ನಿಷೇಧ: ಕೇಂದ್ರದ ಫ್ಯಾಸಿಸ್ಟ್ ನೀತಿ

Update: 2017-06-08 15:14 GMT

ತಿರುವನಂತಪುರ,ಜೂ.8: ಹತ್ಯೆಗಾಗಿ ಜಾನುವಾರುಗಳ ಮಾರಾಟವನ್ನು ನಿಷೇಧಿಸುವ ಕೇಂದ್ರದ ಅಧಿಸೂಚನೆಯನ್ನು ವಿರೋಧಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯಲ್ಲಿ ಆಡಳಿರೂಢ ಎಡರಂಗ ಹಾಗೂ ಪ್ರತಿಪಕ್ಷ ಯುಡಿಎಫ್‌ನ ಸದಸ್ಯರು ಒಕ್ಕೊರಲಿನಿಂದ ಅಂಗೀಕರಿಸಿದ್ದಾರೆ ಹಾಗೂ ಕೇಂದ್ರದ ಫ್ಯಾಶಿಸ್ಟ್ ನೀತಿಯನ್ನು ಅನುಸರಿಸುತ್ತಿದೆಯೆಂದವರು ಖಂಡಿಸಿದ್ದಾರೆ.

ಗೋಹತ್ಯೆ ನಿಷೇಧದ ಅಧಿಸೂಚನೆಯ ಬಗ್ಗೆ ಚರ್ಚಿಸಲೆಂದೇ ವಿಶೇಷವಾಗಿ ಕರೆಯಲಾದ ಒಂದು ದಿನದ ಅಧಿವೇಶನದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸದಸ್ಯರು ಕೇಂದ್ರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು. ಗೋ ಹತ್ಯೆ ನಿಷೇಧ ಅಧಿಸೂಚನೆಯು ರಾಜ್ಯದ ಹಕ್ಕುಗಳ ಮೇಲಿನ ಅತಿಕ್ರಮಣ ಮಾತ್ರವಲ್ಲ ಜನತೆಗಿರುವ ಆಹಾರದ ಆಯ್ಕೆಯ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಏಕೈಕ ಶಾಸಕ ಓ. ರಾಜ್‌ಗೋಪಾಲ್ ಅವರನ್ನು ಹೊರತುಪಡಿಸಿ ಈ ವಿವಾದಾತ್ಮಕ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯುವಂತೆ ಸದನದ ಸದಸ್ಯರೆಲ್ಲರೂು  ಆಗ್ರಹಿಸಿದರು.ಹತ್ಯೆಗಾಗಿ ಗೋವುಗಳ ಮಾರಾಟವನ್ನು ನಿಷೇಧಿಸುವ ಕೇಂದ್ರದ ಕ್ರಮವು ಕೋಮುವಾದಿ ಉದ್ದೇಶದಿಂದ ಕೂಡಿದೆ ಮಾತ್ರವಲ್ಲ ಶ್ರಮಿಕರ ಹಾಗೂ ರೈತರ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಜಾನುವಾರು ಮಾರಾಟವು ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಹೆಚ್ಚುವರಿ ಆದಾಯದ ಮೂಲವಾಗಿದೆ. ಆದರೆ ಮೋದಿ ಸರಕಾವು ಮಾಂಸಮಾರಾಟ ಉದ್ಯಮವನ್ನು ಕಾರ್ಪೊರೇಟೀಕರಣಗೊಳಿಸು ದುರುದ್ದೇಶದಿಂದ ಈ ಅಧಿಸೂಚನೆಯನ್ನು ಹೊರಡಿಸಿದೆಯೆಂದವರು ದೂರಿದರು.

 ಬಿಜೆಪಿ ಶಾಸಕ ಓ.ರಾಜ್‌ಗೋಪಾಲ್ ಮಾತನಾಡಿ,ಗೋಹತ್ಯೆ ನಿಷೇಧದ ವಿರುದ್ಧ ಅಧಿಸೂಚನೆಯನ್ನು ವಿರೋಧಿಸುವ ನೆಪದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಒಗ್ಗೂಡಿರುವುದು, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ವಿರುದ್ಧ ಮಹಾಮೈತ್ರಿಯನ್ನು ಏರ್ಪಡಿಸುವ ಸೂಚನೆಯಾಗಿದೆ ಎಂದು ಟೀಕಿಸಿದರು. ‘‘ರಾಜ್ಯಗಳಿಂದ ಸಲಹೆಸೂಚನೆಗಳನ್ನು ಪಡೆದ ಬಳಿಕ ಅಧಿಸೂಚನೆಯಲ್ಲಿ ಮಾರ್ಪಾಡುಗಳನ್ನು ಮಾಡಲು ಸಿದ್ದವೆಂದು ಕೇಂದ್ರ ಸರಕಾರವು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ರಾಜಕೀಯ ದುರುದ್ದೇಶದಿಂದ ಸದನವನ್ನು ಯುಡಿಎಫ್, ಎಲ್‌ಡಿಎಫ್ ದುರ್ಬಳಕೆ ಮಾಡುತ್ತಿವೆ’’ ಎಂದವರು ಆರೋಪಿಸಿದರು.

  ಅಧಿಸೂಚನೆಯನ್ನು ವಿರೋಧಿಸುವ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಜ್ ವಿಜಯನ್ ಅವರು ಸಂಘಪರಿವಾರದ ರಾಜಕೀಯ ಕಾರ್ಯಸೂಚಿಯನ್ನು ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆಯೆಂದು ಆಪಾದಿಸಿದರು.

   ಕೇರಳದಲ್ಲಿ ಶೇ.95ರಷ್ಟು ಜನರು ಮಾಂಸಹಾರಿಗಳೆಂದು ತಿಳಿಸಿದ ಅವರು ಕೇಂದ್ರದ ಕ್ರಮವು ಜನರ ಆಹಾರದ ಆಯ್ಕೆಯ ಅತಿಕ್ರಮಣವಾಗಿದೆಯೆಂದರು. ರಾಜ್ಯದಲ್ಲಿ ಪ್ರತಿ ವರ್ಷವೂ 6552 ಕೋಟಿ ರೂ. ವೌಲ್ಯದ 2.5 ಲಕ್ಷ ಟನ್ ಮಾಂಸ ಮಾರಾಟವಾಗುತ್ತಿದ್ದು, ಅಧಿಸೂಚನೆ ಜಾರಿಗೊಂಡಲ್ಲಿ ಮಾಂಸ ಉದ್ಯಮಕ್ಕೆ ತೀವ್ರ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಲ್ಲಿ ರೈತರು ಮುಷ್ಕರಕ್ಕಿಳಿದಿರುವುದನ್ನು ಪ್ರಸ್ತಾಪಿಸಿದ ಅವರು ದೇಶದ ರೈತ ಸಮುದಾಯವು ಈಗಾಗಲೇ ಬಿಕ್ಕಟ್ಟಿನಲ್ಲಿದ್ದು, ಕೇಂದ್ರದ ನೂತನ ನಿರ್ಧಾರದಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆಯೆಂದರು.

  ಹೊಸದಿಲ್ಲಿಯಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಮೇಲೆ ಬುಧವಾರ ನಡೆದ ಹಲ್ಲೆ ಯತ್ನದ ಘಟನೆಯೂ ಇಂದು ಕೇರಳ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಸಂಘಪರಿವಾರವು ತೋಳ್ಬಲದ ಮೂಲಕ ತನ್ನ ರಾಜಕೀಯ ವಿರೋಧಿಗಳ ಸದ್ದಡಗಿಸಲು ಯತ್ನಿಸುತ್ತಿದೆಯೆಂದು ಸಿಪಿಎಂ ಸದಸ್ಯರು ಆರೋಪಿಸಿದರು.

   ಮಾರಾಟಕ್ಕಾಗಿ ಗೋಹತ್ಯೆ ನಿಷೇಧ ಅಧಿಸೂಚನೆಯು, ನೋಟು ನಿಷೇಧದಂತೆ ಮೋದಿ ಸರಕಾರದ ಸರ್ಜಿಕಲ್ ದಾಳಿ ಆಗಿದೆ ಹಾಗೂ ಇದು ದೇಶಕ್ಕೆ ಫ್ಯಾಶಿಸಂನ ಆಗಮನದ ಸೂಚನೆಯಾಗಿದೆ. ಮೋದಿಯವರೀಗ ‘ಅಭಿನವ ಹಿಟ್ಲರ್’ ಆಗಿ ಪರಿವರ್ತನೆಗೊಂಡಿದ್ದಾರೆ.

ರಮೇಶ್ ಚೆನ್ನಿತ್ತಲ

ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕ

  ತನ್ನ ಯಾವುದೇ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಎನ್‌ಡಿಎ ಸರಕಾರವು ರಾಜಕೀಯ ಲಾಭಕ್ಕಾಗಿ ಜನರನ್ನು ಕೋಮು ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದೆ.

ಪಿಣರಾಯ್ ವಿಜಯನ್ ಕೇರಳ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News