×
Ad

ಉಡುಪಿಯ ಸುದರ್ಶನ್ ಕಾಮತ್‌ರಿಂದ ದೇಶ ಸೇವೆ

Update: 2017-06-08 20:42 IST

ಉಡುಪಿ, ಜೂ.8: ಉಡುಪಿಯ ಕಾಮತ್ ಎಂಡ್ ಕಂಪೆನಿಯ ಮಾಲಕ ಪಿ.ಸುದರ್ಶನ್ ಕಾಮತ್(70) ಕಳೆದ 9 ತಿಂಗಳುಗಳಿಂದ ಭಾರತ ಸರಕಾರದ ಸೈನಿಕರ ನಿಧಿಗೆ 5000 ರೂ.ನಂತೆ ದೇಣಿಗೆಯನ್ನು ನೀಡುತ್ತಿದ್ದು, ಇದನ್ನು ತನ್ನ ಜೀವಿತಾವಧಿಯವರೆಗೆ ನೀಡಲು ಅವರು ನಿರ್ಧರಿಸಿದ್ದಾರೆ.

ಕಳೆದ ದೀಪಾವಳಿ ಸಂದರ್ಭ ಟಿವಿಯಲ್ಲಿ ದೇಶದ ಪ್ರಧಾನಿ ಸೈನಿಕರಿಗೆ ಶುಭ ಹಾರೈಸುವಂತೆ ಕೇಳಿಕೊಳ್ಳುವುದನ್ನು ನೋಡಿದ ಕಾಮತ್, ಇದರಿಂದ ಸೈನಿಕರಿಗೆ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರಿತು ದೇಣಿಗೆ ನೀಡುವ ನಿರ್ಧಾರಕ್ಕೆ ಬಂದರು. ಅದರಂತೆ ಅಂದಿನಿಂದ ಭಾರತ ಸರಕಾರದ ಹುತಾತ್ಮ ಯೋಧರ ಕುಟುಂಬ ಕಲ್ಯಾಣ ನಿಧಿಗೆ ಪ್ರತಿ ತಿಂಗಳು 5000ರೂ. ದೇಣಿಗೆಯನ್ನು ನೀಡುತ್ತಾ ಬರುತ್ತಿದ್ದಾರೆ.

ಇದನ್ನು ತನ್ನ ಜೀವಿತಾವಧಿಯವರೆಗೂ ಮುಂದುವರೆಸಿಕೊಂಡು ಹೋಗುವ ಇರಾದೆಯನ್ನು ಅವರು ಹೊಂದಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸಿದ ಇವರು ಯೋಧರ ಕಷ್ಟ ಹಾಗೂ ಹುತಾತ್ಮ ಯೋಧರ ಯಾತನೆಯನ್ನು ಮನಗಂಡು ಈ ಸೇವೆಯನ್ನು ನೀಡುತ್ತಿದ್ದಾರೆ. ಕಡಿಯಾಳಿಯ ನಿವಾಸಿಯಾಗಿರುವ ಸುದರ್ಶನ್ ಕಾಮತ್ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ‘ಭಾರತದ ಪ್ರಜೆಗಳು ನೆಮ್ಮದಿಯ ಬದುಕು ಸಾಗಿಸುವುದರ ಹಿಂದೆ ಗುಂಡಿಗೆ ಎದೆಯೊಡ್ಡಿ ನಿಲ್ಲುವ ಭಾರತೀಯ ಸೈನಿಕರ ಅರ್ಹನಿಶಿಯ ಶ್ರಮವಿದೆ. ಸೈನಿಕ ದೇಶಕ್ಕಾಗಿ ಹುತಾತ್ಮನಾದಾಗ ಆತನ ಕುಟುಂಬ ವೇದನೆಯಲ್ಲಿ ದಿನ ಕಳೆಯ ಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ವಿಷಯ ಮನಗಂಡು ಕಾಮತ್ ದೇಣಿಗೆ ನೀಡುತ್ತಿದ್ದಾರೆ. ಇವರ ದೇಶ ಸೇವಾ ಮನೋಭಾವ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News