ಗ್ರಾಮೀಣ ಅಭ್ಯರ್ಥಿಗಳು ಪರಿಶ್ರಮಪಟ್ಟರೆ ಐಎಎಸ್ ಕಷ್ಟವಲ್ಲ: ನಂದಿನಿ

Update: 2017-06-08 15:33 GMT

ಸುಬ್ರಹ್ಮಣ್ಯ, ಜೂ.8: ಗ್ರಾಮೀಣ ಭಾಗದ ಜನ ಕೀಳರಿಮೆ ಹೋಗಲಾಡಿಸಿಕೊಂಡು ಮುನ್ನಡೆಯಬೇಕು. ಹೆಚ್ಚು ಪರಿಶ್ರಮಯುಕ್ತವಾಗಿ ಶ್ರಮ ಪಟ್ಟರೆ ಗ್ರಾಮೀಣರಿಗೆ ಐಎಎಸ್ ತೇರ್ಗಡೆಯಾಗುವುದು ಕಷ್ಟವಲ್ಲ ಎಂದು ಐಎಎಸ್‌ನಲ್ಲಿ ಪ್ರಥಮ ರ್ಯಾಂಕ್ ಪಡೆದ ನಂದಿನಿ ಕೆ.ಆರ್. ಅಭಿಪ್ರಾಯಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾಷೆ ಅನ್ನುವುದು ಐಎಎಸ್ ಪರೀಕ್ಷೆಗೆ ಪ್ರಧಾನವಲ್ಲ. ನಾನು ಕನ್ನಡ ಸಾಹಿತ್ಯ ಬಳಸಿಕೊಂಡು ಐಎಎಸ್ ಬರೆದಿದ್ದೇನೆ. ಹಾಗಾಗಿ ಭಾಷೆ ಇಲ್ಲಿ ವಸ್ತುವಲ್ಲ. ಭಾಷೆ ಅನ್ನುವುದು ಒಂದು ಮಾಧ್ಯಮ ಅಷ್ಟೆ. ಇಂಗ್ಲಿಷ್ ಸರ್ವಸ್ವ ಅಲ್ಲ. ಕನ್ನಡದಲ್ಲಿ ಎಲ್ಲಾ ಪೇಪರ್‌ಗಳನ್ನು ಬರೆಯುವ ಅವಕಾಶ ಇದೆ. ಆದುದರಿಂದ ಕನ್ನಡಿಗರು ಭಾಷೆಯ ಬಗ್ಗೆ ಆತಂಕ ಪಡಬೇಕಾಗಿಲ್ಲ.
ಚಿಕ್ಕ ವಯಸ್ಸಿ ನಿಂದಲೂ ಐಎಎಸ್ ಮಾಡಬೇಕೆಂಬ ಆಸೆ ಇತ್ತು. ಅದಕ್ಕಾಗಿ ಹಿಂದಿನಿಂದಲೇ ಓದುವಿಕೆಯ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದೆ.ಈ ಹಿಂದೆ ಐಎಎಸ್‌ನಲ್ಲಿ ಕಡಿಮೆ ಅಂಕ ಬಂದಾಗ ನಾನು ದೃತಿಗೆಡಲಿಲ್ಲ. ಛಲದಿಂದ ಮುಂದುವರೆದೆ ಎಂದರು.

ನಾನು ಭಾರತೀಯ ಆಡಳಿತ ಸೇವೆಯಲ್ಲಿ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಲು ಬಯಸಿದ್ದೇನೆ ಎಂದರು.

ಶ್ರೀ ದೇವರ ದರುಶನ:

ಈ ಮೊದಲು ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು ಸುಬ್ರಹ್ಮಣ್ಯ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು. ಬಳಿಕ ನರಸಿಂಹ ದೇವರ ದರುಶನ ಮಾಡಿದರು. ಬಳಿಕ ಹೊಸಳಿಗಮ್ಮ ದೇವಿಯ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು. ತದನಂತರ ಶ್ರೀ ದೇವಳದಲ್ಲಿ ಪ್ರಸಾದ ಬೋಜನ ಸ್ವೀಕರಿಸಿದರು. ನಂದಿನಿ ಅವರೊಂದಿಗೆ ಅವರ ತಂದೆ ಶಿಕ್ಷಕ ಕೆ.ವಿ.ರಮೇಶ್, ತಾಯಿ ಕೆ.ವಿ.ವಿಮಲಮ್ಮ, ಸಹೋದರ ತರುಣ್ ಪಾಟೇಲ್ ಇದ್ದರು.

ಶ್ರೀ ದೇವಳಕ್ಕೆ ಆಗಮಿಸಿದ ಇವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಭಟ್, ಶ್ರೀ ದೇವಳದ ಶಿಷ್ಠಾಚಾರ ವಿಭಾಗದ ಗೋಪಿನಾಥ್ ನಂಬೀಶ ಮತ್ತು ಪ್ರಮೋದ್ ಕುಮಾರ್ ಎಸ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News