ಸಿಪಿಎಂ ಮುಖಂಡ ಯೆಚೂರಿ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಮಂಗಳೂರು, ಜೂ. 8: ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಮೇಲೆ ಹಲ್ಲೆ ಯತ್ನವನ್ನ್ನು ಖಂಡಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸಿಪಿಎಂ ಕೇಂದ್ರ ಸಮಿತಿ ನೀಡಿದ ಕರೆಯ ಮೇರೆಗೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಆರ್. ಶ್ರೀಯಾನ್, ಸಿಪಿಎಂ ಕಚೇರಿಗೆ ನುಗ್ಗಿದ ಸಂಘಪರಿವಾರದ ಗೂಂಡಾಗಳು ಸಿಪಿಎಂ ರಾಷ್ಟ್ರ ನಾಯಕ ಸೀತಾರಾಮ ಯೆಚೂರಿಯವರ ಮೇಲೆ ಹಲ್ಲೆಗೆ ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ. ಮಾತ್ರವಲ್ಲದೆ ಆರೆಸೆಸ್ ಈ ಮೂಲಕ ತನ್ನ ಪ್ಯಾಸಿಸ್ಟ್ ಸಂಸ್ಕೃತಿಯನ್ನು ಬಿಚ್ಚಿಡುತ್ತದೆ. ಏಕಸಂಸ್ಕೃತಿ, ಏಕರಾಷ್ಟ್ರ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಜಾತ್ಯಾತೀತ ತತ್ವಕ್ಕೆ ಕೊಡಲಿಪೆಟ್ಟು ನೀಡುತ್ತಿದೆ. ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿರುವ ಆರೆಸೆಸ್ ಇಂದು ದೇಶದ ಸರಕಾರವನ್ನೇ ನಿಯಂತ್ರಿಸುತ್ತಿರುವುದು ದೇಶದ ದುರಂತವಾಗಿದೆ ಎಂದು ಹೇಳಿದರು.
ಪ್ರಾಸ್ತಾಕವಾಗಿ ಮಾತನಾಡಿದ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅವರು, ದೇಶದ ಸ್ವಾತಂತ್ರ ಚಳುವಳಿಯಲ್ಲಿ ಎಳ್ಳಷ್ಟೂ ಪಾತ್ರವಹಿಸದ ಆರೆಸೆಸ್ ಬ್ರಿಟಿಷರೊಂದಿಗೆ ಶಾಮೀಲಾಗಿ ದೇಶಪ್ರೇಮ ಹೋರಾಟಗಾರರ ಸುಳಿವು ನೀಡಿರುವುದಲ್ಲದೆ ಬ್ರಿಟಿಷರಿಗೆ ಮುಚ್ಚಳಿಕೆ ಬರೆದು ಕೊಟ್ಟು ದೇಶದ್ರೋಹದ ಕೆಲಸವನ್ನು ಮಾಡಿದೆ. ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೆ ದೇಶಾದ್ಯಂತ ಅನೇಕ ವಿದ್ವಂಸಕ ಕೃತ್ಯಗಳನ್ನು ನಡೆಸಿ ಕೋಮುಗಲಭೆಗಳನ್ನು ಸೃಷ್ಟಿಸಿ ಸಾವಿರಾರು ಜನರ ಮಾರಣ ಹೋಮ ನಡೆಸಿದ ಆರೆಸೆಸ್ ನಿಜಕ್ಕೂ ದೇಶದ ಭಯೋತ್ಪಾದಕ ಸಂಘಟನೆ ಹಾಗೂ ದೇಶದ್ರೋಹಿ ಸಂಘಟನೆಯಾಗಿದೆ ಎಂದರು.
ಆರೆಸೆಸ್‌ನ ಕುತಂತ್ರಗಳನ್ನು ಜನತೆಯ ಮುಂದೆ ಬಿಚ್ಚಿಡುವುದು ಸಿಪಿಐ(ಎಂ) ಮಾತ್ರ. ಆದ್ದರಿಂದಲೇ ಸಿಪಿಎಂನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ದೈಹಿಕ ದಾಳಿಗಳನ್ನು ನಡೆಸುತ್ತಿರುವುದು ಆರೆಸೆಸ್‌ನ ವಿಕೃತ ಹಾಗೂ ಪ್ಯಾಸಿಸ್ಟ್ ಗುಣವನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಯಾದವ ಶೆಟ್ಟಿ ಮಾತನಾಡಿ, ಸೀತಾರಾಮ ಯೆಚೂರಿಯವರು ಸಿಪಿಎಂನ ರಾಷ್ಟ್ರೀಯ ನಾಯಕರು ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದ ಮಹಾನ್ ಮೇಧಾವಿಗಳು, ರಾಜ್ಯ ಸಭಾ ಸದಸ್ಯರೂ ಕೂಡ. ಅಂತಹ ನಾಯಕರ ಮೇಲೆ ದಾಳಿ ನಡೆಸುವುದು ಆರೆಸೆಸ್‌ನ ದಿವಾಳಿಕೋರತನವಾಗಿದೆ. ಜನರ ಬದುಕಿಗಾಗಿ ಹೋರಾಟ ನಡೆಸಿದ ಕೀರ್ತಿ ಕೆಂಬಾವುಟಕ್ಕಿದ್ದರೆ, ಕೇಸರಿ ಬಾವುಟಕ್ಕೆ ಯಾವ ಚರಿತ್ರೆ ಇದೆ? ಜಾತಿ, ಧರ್ಮದ ಹೆಸರಿನಲ್ಲಿ ಕೋಮುಗಲಭೆ ನಡೆಸಿ ಅಮಾಯಕ ಯುವಕರನ್ನು ಬಲಿ ಕೊಟ್ಟಿದ್ದೇ ಕೇಸರಿ ಬಾವುಟದ ಆರೆಸೆಸ್‌ನ ಚರಿತ್ರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಂಗಳೂರಿನ ನಿವೃತ್ತ ಪೊಲೀಸ್ ಅಧಿಕಾರಿ ಟಿ.ಸಿ.ಎಂ. ಶರೀಫ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಿಪಿಎಂ ಜಿಲ್ಲಾ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್, ಪದ್ಮಾವತಿ ಶೆಟ್ಟಿ, ಜಯಂತ ನಾಯ್ಕಿ, ಜಯಂತಿ ಶೆಟ್ಟಿ, ರಾಮಣ್ಣ ವಿಟ್ಲ, ರಮಣಿ ಮೂಡಬಿದ್ರಿ, ಸದಾಶಿದಾಸ್, ಸತೀಶನ್, ಹರಿದಾಸ್, ವಾಸುದೇವ ಉಚ್ಚಿಲ, ಕೃಷ್ಣಪ್ಪ ಕೊಂಚಾಡಿ, ಸಂತೋಷ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.