ಕಾರು ಢಿಕ್ಕಿಯಿಂದ ಮೃತ್ಯು ಪ್ರಕರಣ: ಚಾಲಕನಿಗೆ ಶಿಕ್ಷೆ
ಮಂಗಳೂರು, ಜೂ. 8: ವರ್ಷದ ಹಿಂದೆ ಬೈಕಂಪಾಡಿ ಜಂಕ್ಷನ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಾದಚಾರಿ ಸುರತ್ಕಲ್ ಕಾಟಿಪಳ್ಳದ ನಿವಾಸಿ ಹರಿ ಎನ್. ಮೂಲ್ಯ ಯಾನೆ ಹರೀಶ್ (53) ಎಂಬವರ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಮಂಗಳೂರಿನ ಜೆ.ಎಂ.ಎಫ್.ಸಿ. 2 ನೆ ನ್ಯಾಯಾಲಯವು 1 ವರ್ಷ ಶಿಕ್ಷೆ ಮತ್ತು 6,000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಕಾಪು ಉಚ್ಚಿಲದ ಕಿಶೋರ್ ಮಯ್ಯ (39) ಶಿಕ್ಷೆಗೊಳಗಾದವರು ಎಂದು ಗುರುತಿಸಲಾಗಿದೆ.
2016 ಮಾರ್ಚ್ 28 ರಂದು ರಾತ್ರಿ ಹರೀಶ್ ಬೈಕಂಪಾಡಿ ಜಂಕ್ಷನ್‌ನಲ್ಲಿ ರಸ್ತೆ ದಾಟಲು ನಿಂತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಹರಿಶ್ ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಬಳಿಕ ಸಾವನ್ನಪ್ಪಿದ್ದರು.
ಈ ಬಗ್ಗೆ ಕಾರು ಚಾಲಕ ಕಿಶೋರ್ ಮಯ್ಯನ ವಿರುದ್ಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಮಂಜುನಾಥ್ ಟಿ.ಎನ್. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತಿತಿಕೊಂಡ ಮಂಗಳೂರು ಜೆ.ಎಂ.ಎಫ್.ಸಿ. 2ನೆ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಕುಂದರ್ ಅವರು ಕಿಶೋರ್ ಮಯ್ಯನಿಗೆ ಐಪಿಸಿ ಸೆಕ್ಷನ್ 279 (ಅತಿ ವೇಗ ಮತ್ತು ಅಜಾಗ್ರತೆಯ ಚಾಲನೆ) ಅನ್ವಯ 3 ತಿಂಗಳ ಶಿಕ್ಷೆ ಮತ್ತು 1000 ರೂ. ದಂಡ ಹಾಗೂ ಐಪಿಸಿ ಸೆಕ್ಷನ್ 304ಎ (ಅಪಘಾತದಿಂದ ಮರಣಾಂತಿಕ ಗಾಯ ಮತ್ತು ಸಾವು) ಅನ್ವಯ 1 ವರ್ಷದ ಸಜೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಚೇತನ್ ನಾಯಕ್ ವಾದ ಮಂಡಿಸಿದ್ದರು.