ಯೆಚೂರಿ ಮೇಲಿನ ಹಲ್ಲೆ ಯತ್ನ ಖಂಡಿಸಿ ಸಿಪಿಎಂ ಪ್ರತಿಭಟನೆ

Update: 2017-06-08 16:40 GMT

ಕುಂದಾಪುರ, ಜೂ.8: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ಹಲ್ಲೆಗೆ ಯತ್ನಿಸಿದ ಆರೆಸ್ಸೆಸ್ ಗೂಂಡಾಗಿರಿಯನ್ನು ಖಂಡಿಸಿ ಸಿಪಿಐಎಂ ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿಗಳ ನೇತೃತ್ವದಲ್ಲಿ ಗುರುವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ಈ ದೇಶದಲ್ಲಿ ಅನ್ಯಾಯ, ದಬ್ಬಾಳಿಕೆಗಳ ವಿರುದ್ದ ಧ್ವನಿ ಎತ್ತುವವರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಆರೆಸ್ಸೆಸ್‌ನ ದೈಹಿಕ ದಾಳಿಯಿಂದ ನಮ್ಮ ನ್ಯಾಯಯುತ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸೈದ್ದಾಂತಿಕವಾಗಿ ಎದುರಿಸಲಾಗದವರು ದೈಹಿಕ ದಾಳಿಗೆ ಮುಂದಾಗುತ್ತಿದ್ದಾರೆ. ಯೆಚೂರಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಯುವಕರಿಗೆ ಧರ್ಮದ ಅಫೀಮನ್ನು ತುಂಬಿ, ಹಲ್ಲೆಗೆ ಪ್ರಚೋದನೆ ನೀಡಿ ಈ ದೇಶದ ಕೋಮು ಸಾಮರಸ್ಯವನ್ನು ಕದಡುವಂತಹ ಕೆಲಸವನ್ನು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪಕ್ಷ ನಡೆಸುತ್ತಿದೆ ಎಂದ ಅವರು, ಇಡೀ ದೇಶದಲ್ಲಿ ಗೋವು, ಧರ್ಮದ ಹೆಸರಿನಲ್ಲಿ ವ್ಯಾಪಕ ಹಿಂಸಾಚಾರಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಹಾಗೂ ಅಂತಹ ಸಂಘಟನೆಗಳನ್ನು ನಿಷೇಧ ಮಾಡುವ ಕೆಲಸಗಳು ಆಳುವ ಸರಕಾರ ಮಾಡುತ್ತಿಲ್ಲ ಎಂದು ದೂರಿದರು.

ಸಿಪಿಎಂ ಮುಖಂಡರಾದ ಮಹಾಬಲ ವಡೇರಹೋಬಳಿ, ವಿ.ನರಸಿಂಹ, ವೆಂಕಟೇಶ ಕೋಣಿ ಮಾತನಾಡಿದರು. ಮುಖಂಡರಾದ ಲಕ್ಷ್ಮಣ ಡಿ., ಚಂದ್ರ ದೇವಾಡಿಗ, ಪ್ರಕಾಶ ಕೋಣಿ, ಸುಧಾಕರ ಕಲ್ಲಾಗರ, ಟಿ.ಮೋಹನ್ ಮೊದ ಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News