×
Ad

ಮಂದಸೌರ್‌ನಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ ಐವರು ರೈತರು ಸತ್ತಿದ್ದನ್ನು ಒಪ್ಪಿಕೊಂಡ ಮಧ್ಯಪ್ರದೇಶ ಸರಕಾರ

Update: 2017-06-08 22:11 IST

ಹೊಸದಿಲ್ಲಿ,ಜೂ.8: ತನ್ನ ಮೊದಲಿನ ಹೇಳಿಕೆಯಿಂದ ಗುರುವಾರ ಹಿಂದೆ ಸರಿದ ಮಧ್ಯಪ್ರದೇಶದ ಗೃಹಸಚಿವ ಭೂಪೇಂದ್ರ ಸಿಂಗ್ ಅವರು,ಮಂದಸೌರ್‌ನಲ್ಲಿ ಸತ್ತ ಐವರು ರೈತರು ಪೊಲೀಸ ಗೋಲಿಬಾರಿಗೆ ಬಲಿಯಾಗಿದ್ದಾರೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡರು.

ಐವರು ರೈತರು ಪೊಲೀಸ್ ಗೋಲಿಬಾರಿನಲ್ಲಿ ಸಾವನ್ನಪ್ಪಿರುವುದು ತನಿಖೆಯಿಂದ ದೃಢಪಟ್ಟಿದೆ. ರೈತರು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿರಬಹುದು ಎಂದು ತಾನು ಈ ಹಿಂದೆ ಹೇಳಿದ್ದೆ. ತಾನಿದನ್ನು ಮೊದಲು ಒಪ್ಪಿಕೊಂಡಿದ್ದು, ಹಲವು ವಾಹಿನಿಗಳು ಅದನ್ನು ಪ್ರಸಾರ ಮಾಡಿವೆ ಎಂದು ಸಿಂಗ್ ಹೇಳಿದರು.

ರೈತರು ಗೋಲಿಬಾರಿಗೆ ಬಲಿಯಾಗಿದ್ದಾರೆ ಎನ್ನುವುದನ್ನು ಸಿಂಗ್ ಆರಂಭದಲ್ಲಿ ನಿರಾಕರಿಸಿದ್ದರು. ಸಮಾಜ ವಿರೋಧಿ ಶಕ್ತಿಗಳು ರೈತರ ಮುಷ್ಕರದಲ್ಲಿ ಸೇರಿಕೊಂಡು ಜನರತ್ತ ಗುಂಡುಗಳನ್ನು ಹಾರಿಸಿವೆ ಎಂದು ಅವರು ಪ್ರತಿಪಾದಿಸಿದ್ದರು. ಗುರುವಾರ ಮಂದಸೌರ್‌ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭೇಟಿಯ ಕುರಿತು ಪ್ರಶ್ನೆಗೆ, ಅವರೇಕೆ ಇಲ್ಲಿಗೆ ಬರಬೇಕು? ಸರಕಾರವು ರೈತರ ಎಲ್ಲ ಬೇಡಿಕಗಳನ್ನು ಒಪ್ಪಿಕೊಂಡಿದೆ ಎಂದು ಸಿಂಗ್ ಉತ್ತರಿಸಿದರು.

ಬುಧವಾರ ರೈತರ ಮುಷ್ಕರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಕೇಂದ್ರ ಪರಸ್ಪರ ಆರೋಪಗಳನ್ನು ಮಾಡಿದ್ದವು. ಕಾಂಗ್ರೆಸ್ ವಿಷಯವನ್ನು ರಾಜಕೀಕರಿಸುತ್ತಿದೆ ಮತ್ತು ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ್ದರ ಹಿಂದೆ ಒಳಸಂಚು ಇದೆ ಎಂದು ಕೇಂದ್ರವು ಆರೋಪಿಸಿದ್ದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರಗಳು ರೈತರ ಧ್ವನಿಯನ್ನು ಅಡಗಿಸುತ್ತಿವೆ ಎಂದು ಕಾಂಗ್ರೆಸ್ ಪ್ರತ್ಯಾರೋಪಿಸಿತ್ತು.

ತನ್ಮಧ್ಯೆ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಪ್ರಕಟಿಸಿದ್ದಾರೆ. ಕೃಷಿವೆಚ್ಚಗಳನ್ನು ಕಳೆದು ಬೆಳೆಗಳಿಗೆ ನ್ಯಾಯಯುತವಾದ ಬೆಲೆಗಳನ್ನು ನಿಗದಿಗೊಳಿಸಲು ಸೂತ್ರವೊಂದನ್ನು ರೂಪಿಸಲು ಆಯೋಗವೊಂದನ್ನು ಸ್ಥಾಪಿಸುವುದಾಗಿಯೂ ಸರಕಾರವು ಘೋಷಿಸಿದೆ. 1,000 ಕೋ.ರೂ.ಗಳ ಬೆಲೆ ಸ್ಥಿರೀಕರಣ ನಿಧಿಯೊಂದನ್ನು ತಕ್ಷಣವೇ ರೂಪಿಸುವಂತೆ ಆದೇಶಿಸಿರುವ ಚೌಹಾಣ್ ಜೂ.10ರಿಂದ 30ರವರೆಗೆ ರೈತರಿಂದ ತೊಗರಿ,ಉದ್ದು ಮತ್ತು ಹೆಸರನ್ನು ಖರೀದಿಸಲಾಗುವುದು ಎಂದೂ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News