ಜಿಜೆಎಂ ಬೆಂಬಲಿಗರಿಂದ ಪೊಲೀಸರಿಗೆ ಹಲ್ಲೆ, ಸೇನೆಗೆ ಬುಲಾವ್ ಕಳುಹಿಸಿದ ಮಮತಾ ಬ್ಯಾನರ್ಜಿ
ಕೋಲ್ಕತಾ,ಜೂ.8: ಗುರುವಾರ ದಾರ್ಜಿಲಿಂಗ್‌ನಲ್ಲಿ ಕಲ್ಲುತೂರಾಟ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚುವುದರಲ್ಲಿ ತೊಡಗಿದ್ದ ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ)ದ ಸಾವಿರಾರು ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರಕಾರವು ಸೇನೆಯ ನೆರವನ್ನು ಕೋರಿದೆ.
2011,ಮಾರ್ಚ್‌ನಲ್ಲಿ ಮಮತಾ ಬ್ಯಾನರ್ಜಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ನಿಭಾಯಿಸಲು ಸೇನೆಗೆ ಬುಲಾವ್ ನೀಡಲಾಗಿದೆ. ರಾಜ್ಯ ಸರಕಾರವು ಈ ಹಿಂದೆ 2010ರಲ್ಲಿ ಉತ್ತರ 24 ಪರಗಣಗಳ ಜಿಲ್ಲೆಯ ದೇಗಂಗಾದಲಿ ಹಿಂಸಾಚಾರ ಭುಗಿಲ್ಲೆದ್ದಾಗ ಸೇನೆಯ ನೆರವನ್ನು ಕೋರಿತ್ತು.
ರಾಜ್ಯದ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಬಂಗಾಳಿ ಕಲಿಕೆ ಕಡ್ಡಾಯವಾಗಿರುತ್ತದೆ ಎಂದು ಮಮತಾ ಕಳೆದ ವಾರ ಪ್ರಕಟಿಸಿದ್ದು,ಇದು ಜಿಜೆಎಂ ಪ್ರತಿಭಟನೆಗೆ ಕಾರಣ ವಾಗಿದೆ.
ಘರ್ಷಣೆಗಳಲ್ಲಿ ಹಲವಾರು ಜನರು ಗಾಯಗೊಂಡಿದ್ದಾರಾದರೂ ಖಚಿತ ಸಂಖ್ಯೆ ತಕ್ಷಣಕ್ಕೆ ತಿಳಿದುಬಂದಿಲ್ಲ. ಕಲ್ಲುಗಳಿಂದ ಸಜ್ಜಿತರಾಗಿದ್ದ ಜಿಜೆಎಂ ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರವನ್ನೂ ನಡೆಸಿದ್ದರು.
ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾರ್ಜಿಲಿಂಗ್‌ನ ರಾಜಭವನದಲ್ಲಿ ಮಮತಾ ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಸಂಪುಟ ಸಭೆ ನಡೆದಿದ್ದ ಸಂದರ್ಭ ಈ ಘರ್ಷಣೆಗಳು ಸಂಭವಿಸಿವೆ. ಘೋಷಣೆಗಳನ್ನು ಕೂಗುತ್ತಿದ್ದ ಸಾವಿರಾರು ಜಿಜೆಎಂ ಬೆಂಬಲಿಗರು ರಾಜಭವನದ ಬಳಿ ಜಮಾಯಿಸಿದ್ದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ಮಮತಾ ಹೊರಗೆ ಬಂದಾಗ ಅವರ ಪ್ರತಿಕೃತಿಯನ್ನು ದಹಿಸಲು ಪ್ರಯತ್ನಿಸಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ಆರಂಭಿಸಿದರು.
ಜನರನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಿರೀಕ್ಷಿತ ಪರಿಣಾಮವನ್ನು ಬೀರಲಿಲ್ಲ. ಪ್ರತಿಭಟನಾಕಾರರು ನಾಲ್ಕು ಪೊಲೀಸ್ ವಾಹನಗಳು ಮತ್ತು ಒಂದು ಸಾರ್ವಜನಿಕ ಸಾರಿಗೆ ಬಸ್‌ಗೆ ಬೆಂಕಿ ಹಚ್ಚಿದರು. ಘರ್ಷಣೆಗಳು ನಡೆಯುವಾಗ ಮಮತಾ ಕೇವಲ 500 ಮೀ.ಅಂತರದಲ್ಲಿದ್ದರು.
52 ಪೊಲೀಸರಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೆಚ್ಚುವರಿ ಡಿಜಿಪಿ ಎನ್. ಆರ್.ಬಾಬು ತಿಳಿಸಿದರು. ಮುಂದಿನ ಸೂಚನೆಯವರೆಗೆ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತವು ಸ್ಥಳೀಯ ಟಿವಿ ವಾಹಿನಿಗಳಿಗೆ ಸೂಚಿಸಿದೆ.
ಜಿಜೆಎಂ ಪ್ರದೇಶದಲ್ಲಿ ಶುಕ್ರವಾರ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ನಂತರ ಸುದ್ದಿಗೋಷ್ಠಿಯಲ್ಲಿ ಜಿಜೆಎಂ ಅಧ್ಯಕ್ಷ ಬಿಮಲ್ ಗುರುಂಗ್ ಮುಂದಿನ ಹೆಜ್ಜೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಜಿಜೆಎಂ ಪ್ರತಿಭಟನೆಗೆ ಅನಗತ್ಯ ಗಮನ ನೀಡುವುದು ಬೇಡ, ಅದರಿಂದ ವಿವಾದವೇ ಅಲ್ಲದೆ ವಿಷಯ ವಿವಾದವಾಗುತ್ತದೆ ಎಂದು ಮಮತಾ ಸಂಪುಟ ಸಭೆಯಲ್ಲಿ ತನ್ನ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.
ಜಿಜೆಎಂ ದಾರ್ಜಿಲಿಂಗ್ ಪ್ರದೇಶದಲ್ಲಿ ತೊಂದರೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಆರೋಪಿಸಿದರು.