×
Ad

“ಮಂಗಳಗ್ರಹದಲ್ಲಿ ಸಂಕಷ್ಟದಲ್ಲಿದ್ದೇನೆ, ಸಹಾಯ ಮಾಡಿ” ಎಂಬ ಟ್ವೀಟ್ ಗೆ ಸುಷ್ಮಾ ಪ್ರತಿಕ್ರಿಯೆ ಏನು ಗೊತ್ತೇ?

Update: 2017-06-08 22:17 IST

ಹೊಸದಿಲ್ಲಿ, ಜೂ.8: ಟ್ವಿಟ್ಟರ್ ನಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರನ್ನು ಅಣಕಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ವ್ಯಕ್ತಿಯೋರ್ವನಿಗೆ ಸುಷ್ಮಾ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗಿದೆ.

“ನಾನು ಮಂಗಳ ಗ್ರಹದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದೇನೆ. ಮಂಗಳಯಾನದಲ್ಲಿ ಕಳುಹಿಸಿದ್ದ ಆಹಾರಗಳು ಖಾಲಿಯಾಗುತ್ತಾ ಬಂದಿದೆ. ಮಂಗಳಯಾನ 2ನ್ನು ಯಾವಾಗ ಕಳುಹಿಸುತ್ತೀರಿ” ಎಂದು ಕರಣ್ ಸೈನಿ ಎಂಬಾತ ಟ್ವೀಟ್ ಮಾಡಿದ್ದ. ಇದಕ್ಕೆ ರಿ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ , “ನೀವು ಮಂಗಳಗ್ರಹದಲ್ಲಿ ಸಿಲುಕಿದ್ದರೂ ಭಾರತೀಯ ದೂತವಾಸ ನಿಮಗೆ ಸಹಾಯ ಮಾಡುತ್ತದೆ” ಎಂದು ರಿಟ್ವೀಟ್ ಮಾಡಿದ್ದಾರೆ.

ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಸದಾ ಮುಂದಾಗುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ನಲ್ಲಿ ಜನಪ್ರಿಯರು. ಸಾಕಷ್ಟು ಪ್ರಕರಣಗಳಲ್ಲಿ ಅವರು ಟ್ವೀಟ್ ಮೂಲಕ ನೀಡಿದ್ದ ದೂರಿಗೂ ಸ್ಪಂದಿಸಿದ್ದಾರೆ. ಆದರೆ ಈ ಬಾರಿ ಸುಷ್ಮಾರನ್ನು ಕರಣ್ ಎಂಬಾತ ಹಾಸ್ಯದ ಧಾಟಿಯಲ್ಲಿ ನೆರವು ಯಾಚಿಸಿದ್ದು, ಅದಕ್ಕೂ ಸುಷ್ಮಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದೇ ವೇಳೆ ಸುಷ್ಮಾರನ್ನು ಹಾಸ್ಯ ಮಾಡಿದ ಕರಣ್ ಬಗ್ಗೆಯೂ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.

“ಯಾರಾದರೂ ಒಬ್ಬರು ಒಳ್ಳೆಯ ಕೆಲಸ ಮಾಡಿದರೆ ಕೊನೆಯ ಪಕ್ಷ ಅವರನ್ನು ಗೌರವಿಸಬೇಕು. ಆದರೆ ಅವರನ್ನು ಹಾಸ್ಯ ಮಾಡುವುದರಿಂದ ನೀವು ಎಲ್ಲರ ಗಮನಕ್ಕೆ ಬರುತ್ತೀರಿ ಹೊರತು ಗೌರವ ಸಂಪಾದಿಸುವುದಿಲ್ಲ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಇತ್ತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಲೇ ಪ್ರತಿಕ್ರಿಯೆ ನೀಡಿರುವ ಕರಣ್ ಸೈನಿ, “ಇಸ್ರೋ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯದ ಬಗ್ಗೆ ನನ್ನಲ್ಲಿ ಆಕಾಶದೆತ್ತರ ಗೌರವವಿದೆ. ನನ್ನ ಟ್ವೀಟ್ ಕೇವಲ ಹಾಸ್ಯವಾಗಿತ್ತು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News