ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Update: 2017-06-08 16:50 GMT

ಬಂಟ್ವಾಳ, ಜೂ. 8: ತಾಲೂಕು ಕಚೇರಿಯಲ್ಲಿ ಕಡತಗಳೇ ಸಿಗುತ್ತಿಲ್ಲ. ಬೇಕು ಎಂದಾಗ ಕಡತಗಳು ಕಾಣೆಯಾಗುತ್ತವೆ. ಪ್ರಭಾವ ಬೀರಿ ಕೇಳಿದಾಗ ಮರುದಿನವೆ ಸಿಗುತ್ತದೆ ಎಂಬ ಆಕ್ಷೇಪ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿದ್ದು ಇದಕ್ಕೆ ಸೂಕ್ತ ಪರಿಹಾರ ಸಿಸಿ ಕ್ಯಾಮರಾ ಅಳವಡಿಸುವುದು ಎಂದರು.

ಈ ಸಂದರ್ಭದಲ್ಲಿ ಉತ್ತರಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ, ಮಿನಿ ವಿಧಾನಸೌಧ ಉದ್ಘಾಟನೆಗೊಂಡ ಕೂಡಲೇ ಎಲ್ಲ ಸಮಸ್ಯೆಗಳೂ ಪರಿಹಾರಗೊಳ್ಳುತ್ತದೆ ಎಂದರು. ಮಿನಿ ವಿಧಾನಸೌಧಕ್ಕೆ ರೆಕಾರ್ಡ್ ರೂಮ್ ಶಿಫ್ಟ್ ಆದರೂ ಕಡತಗಳು ಮಾಯವಾಗುವುದು ನಿಂತಿಲ್ಲ. ಇದಕ್ಕೆ ಸೂಕ್ತ ಪರಿಹಾರ ಎಂದರೆ ಸಿ.ಸಿ. ಕ್ಯಾಮರಾ ಅಳವಡಿಸುವುದು ಎಂದು ಸಲಹೆ ನೀಡಿದ ಸುಭಾಶ್ಚಂದ್ರ ಶೆಟ್ಟಿ, ಇಡೀ ಮಿನಿ ವಿಧಾನಸೌಧಕ್ಕೆ ಕ್ಯಾಮರಾ ಅಳವಡಿಸಬೇಕು ಎಂದರು. ಆಗ ತಹಶೀಲ್ದಾರ್ ಉತ್ತರಿಸಿ, ಇದಕ್ಕೆ ದುಡ್ಡನ್ನು ನೀವು ಕೊಡುತ್ತೀರ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಭಾಶ್ಚಂದ್ರ ಶೆಟ್ಟಿ, ದಾನಿಗಳ ನೆರವಿನಿಂದ ಸಿಸಿ ಕ್ಯಾಮರಾ ಅಳವಡಿಸಲು ಸಹಾಯ ಮಾಡುತ್ತೇವೆ. ಪಾರದರ್ಶಕ ಆಡಳಿತ ಒದಗಿಸುವುದು ಅಗತ್ಯ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಅವರೂ ರೆಕಾರ್ಡ್ ರೂಮ್‌ನಲ್ಲಿ ಕಡತ ಕಾಣೆಯಾಗುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಅಂಗನವಾಡಿಗೆ ಆವರಣಗೋಡೆ ನಿರ್ಮಾಣ ವಿಚಾರದಲ್ಲಿ ನಿರ್ವಹಣೆಗೆ ಎಂದಿರುವ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದು ಎಷ್ಟು ಸರಿ ಎಂಬ ವಿಚಾರ ಚರ್ಚೆಗೆ ಬಂತು. ನಯನಾಡು ಅಂಗನವಾಡಿಗೆ ಮೀಸಲಿಟ್ಟ ಹಣ ದುರಸ್ತಿ ಎಂಬ ಬದಲು ಅಭಿವೃದ್ಧಿ ಎಂದು ಆಗಬೇಕಿತ್ತು ಎಂದು ತಾಪಂ ಸದಸ್ಯ ರಮೇಶ್ ಕುಡ್ಮೇರು ಒತ್ತಾಯಿಸಿದರು. ಇದೇ ವೇಳೆ ಅಂಗನವಾಡಿ ಅಭಿವೃದ್ಧಿ ಸಮಿತಿ ಸಭೆಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ ಎಂದೂ ಅವರು ದೂರಿದರು.

ಉತ್ತಮ ಫಲಿತಾಂಶ ದೊರಕಿದ ಸುರಿಬೈಲು ಹೈಸ್ಕೂಲಿಗೆ ಶಿಕ್ಷಕರೇ ಇಲ್ಲ ಎಂಬ ವಿಷಯ ಪ್ರಸ್ತಾಪಿಸಿದ ಸುಭಾಶ್ಚಂದ್ರ ಶೆಟ್ಟಿ 83 ಮಕ್ಕಳು ಇರುವ ಕಡೆ ಕೇವಲ ಇಬ್ಬರು ಶಿಕ್ಷಕರು ಇರುವ ಸನ್ನಿವೇಶವೂ ಇದೆ. ಕೆಲವೆಡೆ ಅದೇ ಸಂಖ್ಯೆಗೆ ಆರು ಶಿಕ್ಷಕರು ಇದ್ದಾರೆ. ಇದು ಯಾವ ನ್ಯಾಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರನ್ನು ಪ್ರಶ್ನಿಸಿದರು.

ಸುರಿಬೈಲು ಹೈಸ್ಕೂಲಿಗೆ ಈ ಬಾರಿ ಶಿಕ್ಷಕರ ಕೊರತೆ ನಡುವೆಯೂ ಶೇ. 65ರಷ್ಟು ಫಲಿತಾಂಶ ಬಂದಿದೆ. ಇದು ಉತ್ತಮ ಸಾಧನೆಯಾಗಿದೆ. ಆದರೆ ಇಲ್ಲಿಗೆ ಶಿಕ್ಷಕರ ನಿಯೋಜನೆಯಾಗದೆ ಸಮಸ್ಯೆ ಆಗುತ್ತಿದೆ ಎಂದರು. ಇದಕ್ಕೆ ದನಿಗೂಡಿಸಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಯಾವುದೇ ಸವಲತ್ತುಗಳು ಇಲ್ಲದೆ ಉತ್ತಮ ಫಲಿತಾಂಶ ಬಂದಿದೆ. ಈ ವರ್ಷವಾದರೂ ಅಧ್ಯಾಪಕರನ್ನು ನೇಮಿಸಿ ಎಂದು ಹೇಳಿದರು.

ಎಲ್ಲಿ ಕಡಿಮೆ ಶಿಕ್ಷಕರು ಇದ್ದಾರೆಯೋ ಅಲ್ಲೆಲ್ಲ ಭರ್ತಿ ಮಾಡಿ ಎಂದು ಉಪಾಧ್ಯಕ್ಷ ಅಬ್ಬಾಸ್ ಅಲಿ ಸೂಚಿಸಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಮಕ್ಕಳಿರುವ ಕಡೆ ಶಿಕ್ಷಕರ ನಿಯೋಜನೆ ನಡೆಯುತ್ತಿದೆ. ಎರಡು ವಾರಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ. ಸುರಿಬೈಲು ಶಾಲೆಗೆ ಶಿಕ್ಷಕರ ಹುದ್ದೆಯೇ ಮಂಜೂರಾಗಿಲ್ಲ ಎಂದು ಹೇಳಿದರೆ, ಶಾಲೆಯೊಂದರಲ್ಲಿ ನಾಡಗೀತೆ, ರೈತಗೀತೆ ಮತ್ತು ರಾಷ್ಟ್ರಗೀತೆ ಹಾಡನ್ನೇ ಕಡಿತ ಮಾಡಲಾಗುತ್ತಿದೆ ಎಂದು ಹೈದರ್ ಆರೋಪಿಸಿದರು.

ಸಭೆ ಆರಂಭಕ್ಕೆ ಮೊದಲು ಕರೋಪಾಡಿ ಗ್ರಾಪಂ ಕಚೇರಿಯೊಳಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು. ಪ್ರಾರ್ಥನೆ ಮುಗಿಯುತ್ತಿದ್ದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಜಲೀಲ್ ಕರೋಪಾಡಿರವರ ತಂದೆ ಉಸ್ಮಾನ್ ಕರೋಪಾಡಿ ಸಭೆಯಿಂದ ನಿರ್ಗಮಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್‌ರನ್ನು ಅವರ ಪುತ್ರ ನವೀನ್ ಭಟ್ ಯುಪಿಎಸ್ಸಿ ಪರೀಕ್ಷೆಯಲ್ಲಿ 37ನೆ ರ್ಯಾಂಕ್ ಗಳಿಸಿದ್ದಕ್ಕಾಗಿ ಅಭಿನಂದಿಸಲಾಯಿತು.

ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯರಾದ ಹೈದರ್ ಕೈರಂಗಳ, ಆದಂ ಕುಂಞ, ಸಂಜೀವ ಪೂಜಾರಿ, ರಮೇಶ್ ಕುಡುಮೇರು, ಮಲ್ಲಿಕಾ ವಿ.ಶೆಟ್ಟಿ, ಯಶವಂತ ಪೂಜಾರಿ, ಶಿವಪ್ರಸಾದ್ ಕನಪಾಡಿ, ಗಣೇಶ್ ಸುವರ್ಣ ಮಾತನಾಡಿದರು. ಇಒ ಸಿಪ್ರಿಯಾನ್ ಮಿರಾಂದಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News