ಅಭ್ಯರ್ಥಿಗಳಿಂದ ಹಣ ಪೀಕಿಸುತ್ತಿದ್ದ ಸೇನಾಧಿಕಾರಿ ಎಟಿಎಸ್ ಬಲೆಗೆ
ಜೈಪುರ,ಜೂ.8: ಸೇನಾ ಭರ್ತಿ ರ್ಯಾಲಿಗಳಲ್ಲಿ ವೈದ್ಯಕೀಯ ಅರ್ಹತಾ ಪ್ರಮಾಣಪತ್ರ ಗಳನ್ನು ನೀಡಲು ಅಭ್ಯರ್ಥಿಗಳಿಂದ ಹಣ ವಸೂಲು ಮಾಡುತ್ತಿದ್ದ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಓರ್ವರನ್ನು ರಾಜಸ್ಥಾನ ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್)ವು ಬಂಧಿಸಿದೆ.
ಎಟಿಎಸ್ ಕಳೆದ ತಿಂಗಳು ನಾಲ್ವರನ್ನು ಬಂಧಿಸುವ ಮೂಲಕ ಸೇನಾ ಭರ್ತಿ ರ್ಯಾಲಿಗಳಿಗೆ ಹಾಜರಾಗುವ ಅಭ್ಯರ್ಥಿಗಳಿಂದ ಹಣ ಪೀಕಿಸುತ್ತಿದ್ದ ಜಾಲವೊಂದನ್ನು ಭೇದಿಸಿದ್ದರು. ಬಂಧಿತರ ವಿಚಾರಣೆ ಸಂದರ್ಭ ವೈದ್ಯಾಧಿಕಾರಿ ಲೆಕಡಾ.ಜಗದೀಶ ಪುರಿಯೂ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.
ಜೈಪುರದಲ್ಲಿ ನಿಯೋಜಿತ ಪುರಿಗೆ ಅಭ್ಯರ್ಥಿಗಳಿಗೆ ವೈದ್ಯಕೀಯ ಅರ್ಹತಾ ಪ್ರಮಾಣಪತ್ರಗಳನ್ನು ವಿತರಿಸುವ ಹೊಣೆಗಾರಿಕೆಯನ್ನು ವಹಿಸಲಾಗಿತ್ತು. ಇದು ಸೇನಾ ಭರ್ತಿಯಲ್ಲಿ ಅಂತಿಮ ಪ್ರಕ್ರಿಯೆಯಾಗಿದೆ ಎಂದು ಎಟಿಎಸ್‌ನ ಎಡಿಜಿ ಉಮೇಶ ಮಿಶ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪುರಿ ಕಳೆದ ಒಂದೂವರೆ ವರ್ಷಗಳಲ್ಲಿ ಇತರ ಆರೋಪಿಗಳೊಂದಿಗೆ ಸೇರಿಕೊಂಡು ಎರಡು ಡಝನ್‌ಗೂ ಅಧಿಕ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದ್ದು, ತಲಾ 35,000-40,000 ರೂ.ವಸೂಲು ಮಾಡುತ್ತಿದ್ದರು.
2006ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಪುರಿ ಈ ಹಿಂದೆ ದಿಲ್ಲಿ ಮತ್ತು ಬರೇಲಿಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಯೋಧರ ಭರ್ತಿಗಾಗಿ ಸೇನಾ ರ್ಯಾಲಿಗಳಿಗೆ ರಚಿಸಲಾಗುವ ಹೆಚ್ಚಿನ ವೈದ್ಯಕೀಯ ಮಂಡಳಿಗಳಲ್ಲಿ ಪುರಿ ಸದಸ್ಯರಾಗಿದ್ದರು.
ಮಿಲಿಟರಿ ಗುಪ್ತಚರ ಮಾಹಿತಿಯ ಮೇರೆಗೆ ಎಟಿಎಸ್ ಮೇ 23ರಂದು ಅರ್ಜುನ ಸಿಂಗ್, ನಂದಸಿಂಗ್ ರಾಠೋಡ್, ಸುನಿಲ್ ವ್ಯಾಸ್ ಮತ್ತು ಮಹೇಂದ್ರ ಸಿಂಗ್ ಎನ್ನುವವರನ್ನು ಬಂಧಿಸಿತ್ತು. ಜೈಪುರದಲ್ಲಿನ ನಂದಸಿಂಗ್ ನಿವಾಸದಿಂದ ನಗದು 1.79 ಕೋ.ರೂ. ಮತ್ತು ನಾಲ್ವರು ಅಭ್ಯರ್ಥಿಗಳ ವೈದ್ಯಕೀಯ ಪ್ರಮಾಣಪತ್ರಗಳನ್ನು ವಶಪಡಿಸಿ ಕೊಳ್ಳಲಾಗಿತ್ತು.
ಪುರಿಯನ್ನು ಗುರುವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, 10 ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿದೆ.