ಗ್ರಾಮ ಪಂಚಾಯತ್ ಅಧ್ಯಕ್ಷೆ ಎಸಿಬಿ ಬಲೆಗೆ

Update: 2017-06-08 16:51 GMT

 ಬೆಂಗಳೂರು, ಜೂ.8: ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಇ-ಖಾತೆಗಾಗಿ ಲಕ್ಷಾಂತರ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಜಯರಾಂ ಎಂಬುವರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಪ್ರಕರಣದ ವಿವರ: ಕಗ್ಗಲೀಪುರ ನಿವಾಸಿಯೊಬ್ಬರು ಅವರ ತಂದೆ ಹೆಸರಿನಲ್ಲಿರುವ ಖಾಲಿ ನಿವೇಶನ ಮತ್ತು ತಾಯಿ ಹೆಸರಿನಲ್ಲಿರುವ ಮನೆ ಹಾಗೂ ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಇ-ಖಾತೆಗಾಗಿ ಕಗ್ಗಲೀಪುರ ಗ್ರಾಮ ಪಾಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಅಧ್ಯಕ್ಷ ಗಾಯಿತ್ರಿ, ಪತಿ ಜಯರಾಂ, ಸಹೋದರ ಶಿವರಾಜ್ ಮತ್ತು ಪಂಚಾಯತ್ ಸದಸ್ಯ ಮುನಿರಾಜು ಸೇರಿ ಇ-ಖಾತೆ ಮಾಡಿಕೊಡಲು 1.5 ಲಕ್ಷ ರೂ. ಲಂಚದ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಎಸಿಬಿ ತಿಳಿಸಿದೆ.

ಪ್ರಕರಣ ದಾಖಲಿಸಿಕೊಂಡ ಎಸಿಬಿ ಗುರುವಾರ ಬೆಳಗ್ಗೆ ಅಧ್ಯಕ್ಷೆ ಗಾಯತ್ರಿ ದೂರುದಾರನಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ಎಸಿಬಿ ರಾಮನಗರ ಜಿಲ್ಲೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News