ಜನರಲ್ ಡಯರ್ ಜೊತೆ ಹೋಲಿಕೆಯಿಂದ ನೋವಾಗಿಲ್ಲ: ರಾವತ್
ಹೊಸದಿಲ್ಲಿ, ಜೂ.9: 1919ರ ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡದಿಂದ ಕುಖ್ಯಾತಿ ಪಡೆದ ಬ್ರಿಟಿಶ್ ಜನರಲ್ ಡಯರ್ ಜೊತೆ ಕೆಲವರು ತನ್ನನ್ನು ಹೋಲಿಸಿರುವುರಿಂದ ತನಗೆ ನೋವಾಗಿಲ್ಲವೆಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘‘ನಾನೋರ್ವ ಸೇನಾಧಿಕಾರಿ. ಇಂತಹ ವಿಷಯಗಳು ನನ್ನನ್ನು ಬಾಧಿಸಲಾರವು. ನಾನು ವ್ಯಕ್ತ್ತಪಡಿಸಿದ ಅಭಿಪ್ರಾಯಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು’’ ಎಂದು ಹೇಳಿದ್ದಾರೆ.
ತನ್ನನ್ನು ಜನರಲ್ ಡಯರ್‌ಗೆ ಹೋಲಿಸಿರುವುದರಿಂದ ತನಗೆ ನೋವಾಗಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾವತ್, ಈ ವಿಷಯದ ಬಗ್ಗೆ ಜನತೆಯೇ ತೀರ್ಪು ನೀಡಬೇಕಾಗಿದೆಯೆಂದಿದ್ದಾರೆ. ಜನರೇ ಅತ್ಯುತ್ತಮ ನ್ಯಾಯಾಧೀಶರಾಗಿದ್ದಾರೆ’’ಎಂದವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ನಾಗರಿಕನೊಬ್ಬನನ್ನು ಸೇನೆಯ ಜೀಪಿಗೆ ಮಾನವಗುರಾಣಿಯಾಗಿ ಕಟ್ಟಿದ ಮೇಜರ್ ಜನರಲ್ ಲಿತುಲ್ ಗೊಗೊಯಿ ಅವರನ್ನು ರಾವತ್ ಪ್ರಶಂಸಿಸಿದ್ದರು. ಶಿಕ್ಷಣ ತಜ್ಞ ಪಾರ್ಥ ಚಟರ್ಜಿ, ಸಿಪಿಎಂ ಮುಖವಾಣಿ ಡೆಮಾಕ್ರಸಿ ಪತ್ರಿಕೆಗೆ ಬರೆದ ಲೇಖನದಲ್ಲಿ ಇದನ್ನು ಖಂಡಿಸಿದ್ದರು ಹಾಗೂ ರಾವತ್ ಅವರನ್ನು ಜನರಲ್ ಡಯರ್‌ಗೆ ಹೋಲಿಸಿದ್ದರು.