ಬಜ್ಪೆ ಏರ್‌ಪೋರ್ಟ್‌ನಲ್ಲಿ 1.6 ಕೆ.ಜಿ. ಚಿನ್ನ ಅಕ್ರಮ ಸಾಗಾಟ: ಮೂವರ ಬಂಧನ
ಮಂಗಳೂರು, ಜೂ. 8: ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ ಆಗಮಿಸಿದ ಮೂವರು ಪ್ರಯಾಣಿಕರಿಂದ ಕಂದಾಯ ಅಧಿಕಾರಿಗಳು 1.6 ಕೆ.ಜಿ ತೂಕದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ವಶಪಡಿಸಿಕೊಂಡ ಚಿನ್ನದ ಮೌಲ್ಯ 49.15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರ ಥಾಣೆ ಉಲ್ಲಾಸ್‌ನಗರದ ಮೂವರು ಆರೋಪಿಗಳು ಗುರುವಾರ ಏರ್ ಇಂಡಿಯಾ ಮತ್ತು ಜೆಟ್ ಏರ್‌ವೇಸ್ ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಆರೋಪಿಗಳು ಗುದದ್ವಾರದಲ್ಲಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದ್ದು, ಕೂಡಲೇ ಆವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಾರ್ಬನ್ ಪೇಪರ್‌ನಿಂದ ಚಿನ್ನದ ಬಿಲ್ಲೆಗಳನ್ನು ಪ್ಯಾಕ್ ಮಾಡಿ ಅಕ್ರಮ ಸಾಗಾಟ ಮಾಡಲೆತ್ನಿಸಿದ್ದರು.
ಆರೋಪಿಗಳನ್ನು ಮಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆಯ ಆಯುಕ್ತ ಡಾ.ಎಂ.ಸುಬ್ರಮಣ್ಯಂ ತಿಳಿಸಿದ್ದಾರೆ.