×
Ad

‘ಪ್ರೇಕ್ಷಕನ ಹೃದಯ ಗೆಲ್ಲುವ ಜಾಣ್ಮೆ ಕಲಾವಿದನಿಗಿರಬೇಕು’

Update: 2017-06-09 15:53 IST

ಕಾಸರಗೋಡು, ಜೂ. 9: ಯಕ್ಷಗಾನದಲ್ಲಿ ಭಾವಾಭಿನಯಕ್ಕೆ ಪ್ರಾಧಾನ್ಯವಿಲ್ಲ ಎಂಬ ಮಾತು ಸರಿಯಲ್ಲ. ಪಾತ್ರದ ಜೀವಾಳವನ್ನರಿತು ಪರಿಪೂರ್ಣವಾಗಿ ಅಭಿನಯಿಸುವ ಕಲಾವಿದರನ್ನು ಪ್ರೇಕ್ಷಕರು ಹೃದಯದ ಹತ್ತಿರಕ್ಕೆ ತಂದುಕೊಳ್ಳುತ್ತಾರೆ. ಆದ ಕಾರಣ ಭಾವಾಭಿನಯ ಮೂಲಕ ಪ್ರೇಕ್ಷಕನ ಹೃದಯ ಗೆಲ್ಲುವ ಜಾಣ್ಮೆ ಯಕ್ಷಗಾನದ ಕಲಾವಿದನಿಗಿರಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಗೋವಿಂದ ಭಟ್ ಸೂರಿಕುಮೇರಿ ಅಭಿಪ್ರಾಯಪಟ್ಟರು.

ಅವರು ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ವತಿಯಿಂದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ಅಂಗವಾಗಿ ಎಡನೀರು ಮಠದ ಪರಿಸರದಲ್ಲಿ ನಡೆಯುತ್ತಿರುವ ಒಂದು ತಿಂಗಳ ಯಕ್ಷಗಾನ ತರಬೇತಿ ಶಿಬಿರಕ್ಕೆ ಭೇಟಿಯಾಗಿ ಶಿಬಿರಾರ್ಥಿಗಳೊಂದಿಗೆ ಮಾತನಾಡಿದರು.

   ಯಕ್ಷಗಾನ ಕ್ಷೇತ್ರದಲ್ಲಿ ಅರುವತ್ತಾರು ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ ಗೋವಿಂದ ಭಟ್ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ರಸಾಯನವನ್ನು ಹಂಚಿಕೊಂಡರು. ಶಿಬಿರಾರ್ಥಿಗಳ ಹಲವು ಸಂಶಯಗಳಿಗೆ ಅವರು ಉತ್ತರಿಸಿದ್ದರು. ಎಳೆಯರ ಅಪೇಕ್ಷೆಯನ್ನು ಮನ್ನಿಸಿ ವೀರ, ಕರುಣ, ಶೃಂಗಾರ, ಹಾಸ್ಯ ಮುಂತಾದ ರಸಭಾವಗಳನ್ನು ಅಭಿನಯದ ಮೂಲಕ ತೋರಿಸಿಕೊಟ್ಟರು.
    ಸೂರಿಕುಮೇರಿಯವರ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಶಿಬಿರಾರ್ಥಿಗಳಲ್ಲದೆ ರೋಹಿಣಿ, ಗಣೇಸ, ಸ್ಕಂದ, ಯತೀಶ್ ಜೆ. ಪಿ., ಧನರಾಜ್, ಸಂದೇಶ್ ಕುಮಾರ್, ಬಾಲಕೃಷ್ಣ ಮಣಿಯಾಣಿ, ಪುತ್ತೂರು ಗಂಗಾಧರ, ಡಾ. ಯು. ಮಹೇಶ್ವರಿ, ಡಾ. ಶಂಕರನಾರಾಯಣ ಭಟ್, ರಮೇಶ್ ಭಟ್ ಪುತ್ತೂರು, ಬಿ. ವಾಮನ ಆಚಾರ್ಯ, ಬಳ್ಳಮೂಲೆ ಗೋವಿಂದ ಭಟ್, ನಾಟ್ಯಗುರುಗಳಾದ ದಿವಾಣ ಶಿವಶಂಕರ ಭಟ್, ಸಬ್ಬಣಕೋಡಿ ರಾಮ ಭಟ್, ಸಂಯೋಜನಾಧಿಕಾರಿ ಡಾ. ರತ್ನಾಕರ ಮಲ್ಲಮೂಲೆ ಪಾಲ್ಗೊಂಡರು.
    ಯಕ್ಷಗಾನದಲ್ಲಿ ಭಾವಾಭಿನಯ ಎಂಬ ವಿಷಯದಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಚಾಲಕ ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಶಿಬಿರಾರ್ಥಿ ಸುಪ್ರಿಯ ವಂದಿಸಿದರು.
  ಜು. 2ರಂದು ಶಿಬಿರ ಸಮಾಪನಗೊಳ್ಳಲಿದೆ. ಪ್ರತಿದಿನ ಅಪರಾಹ್ನ ಉಪನ್ಯಾಸ ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಯಕ್ಷಗಾನದಲ್ಲಿ ಸ್ತ್ರೀವೇಷ ಎಂಬ ವಿಷಯದಲ್ಲಿ ಕುಂಬಳೆ ಶ್ರೀಧರ ರಾವ್ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಿದರು.

ಜೂ. 9ರಂದು ಯಕ್ಷಗಾನದಲ್ಲಿ ಹಾಸ್ಯ ಎಂಬ ವಿಷಯದಲ್ಲಿ ಬಾಲಕೃಷ್ಣ ಮಣಿಯಾನಿ ಮವ್ವಾರು, 10ರಂದು ಯಕ್ಷಗಾನ ಸಾಹಿತ್ಯದ ಕುರಿತು ತಾರಾನಾಥ ವರ್ಕಾಡಿ, 12ರಂದು ಯಕ್ಷಗಾನದಲ್ಲಿ ಪುಂಡುವೇಷ ಎಂಬ ವಿಷಯದಲ್ಲಿ ಡಾ. ಬಳ್ಳಂಬೆಟ್ಟು ಶ್ರೀಧರ ಭಂಡಾರಿ, ಯಕ್ಷಗಾನ ಮತ್ತು ಆಧುನೀಕತೆ ಎಂಬ ವಿಷಯದಲ್ಲಿ ಶಂಕರ ರೈ ಮಾಸ್ತರ್, 13ರಂದು ಯಕ್ಷಗಾನದಲ್ಲಿ ರಾಜವೇಷಗಳು ಎಂಬ ವಿಷಯದಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು, 14ರಂದು ಯಕ್ಷಗಾನದಲ್ಲಿ ತುಳುಪ್ರಸಂಗಗಳು ಎಂಬ ವಿಷಯದಲ್ಲಿ ರಾಧಾಕೃಷ್ಣ ನಾವಡ ಮಧೂರು, 15ರಂದು ಯಕ್ಷಗಾನ ಪರಂಪರೆ ಮತ್ತು ಅನುಭವ ಎಂಬ ವಿಷಯದ ಕುರಿತು ಕೋಳ್ಯೂರು ರಾಮಚಂದ್ರ ರಾವ್, ಕುರಿಯ ಗಣಪತಿ ಶಾಸ್ತ್ರಿ, ಕೋಟೆ ರಾಮ ಭಟ್, ವಿದ್ವಾನ್ ಬಾಬು ರೈ ಮೊದಲಾದವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News