ಬಡವರ ಮಕ್ಕಳೂ ಪೌಷ್ಟಿಕರಾಗಬೇಕು: ಫಿರೋಜ್
ಕೊಣಾಜೆ,ಜೂ.9: ಕೇವಲ ಶ್ರೀಮಂತರ ಮಕ್ಕಳು ಮಾತ್ರವಲ್ಲ ಬಡವರ ಮಕ್ಕಳೂ ಪೌಷ್ಠಿಕರಾಗಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಮೊಟ್ಟೆಭಾಗ್ಯ ಆರಂಭಿಸಿದ್ದು, ಗ್ರಾಮದಲ್ಲಿ ಚಾಲನೆ ನೀಡಲಾಗಿದೆ ಎಂದು ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಫಿರೋಜ್ ತಿಳಿಸಿದರು.
ಸರ್ಕಾರದ ಯೋಜನೆ ಮೊಟ್ಟೆ ಭಾಗ್ಯಕ್ಕೆ ಪಾವೂರು ಗ್ರಾಮದ ಪಡ್ಡಾಯಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದಿಂದ ವಿವಿಧ ಯೋಜನೆಗಳು ಜಾರಿಯಲ್ಲಿದೆ, ಅಂಗನವಾಡಿಗಳಲ್ಲೂ ಮೊಟ್ಟೆ ವಿತರಿಸುವ ಯೋಜನೆ ಮೂಲಕ ಅತ್ಯುತ್ತಮ ಯೋಜನೆ ಜಾರಿಗೆ ತಂದಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಅಂಗನವಾಡಿಗಳ ಕಾರ್ಯಕರ್ತೆಯರಾದ ಫಾತಿಮ ಫಮೀಝ, ಪ್ರೇಮಾ, ಪುಷ್ಪಲತಾ, ಸಹಾಯಕಿಯರಾದ ಭಾರತಿ, ಪ್ರಮೀಳ, ಪೊನ್ನಮ್ಮ, ಪೋಷಕರಾದ ನೌಸಿಯಾ ಹಾಗೂ ಕೌಸರ್ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಪಟಾಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಜೆಸಿಂತಾ ಲೋಬೋ ವಂದಿಸಿದರು.