×
Ad

ಬ್ರಿಟನ್: ಅತಂತ್ರ ಸಂಸತ್ತು ರಚನೆ

Update: 2017-06-09 19:42 IST

ಲಂಡನ್, ಜೂ. 9: ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಮಾತುಕತೆಗಳನ್ನು ಪ್ರಭಾವಶಾಲಿಯಾಗಿ ನಡೆಸುವುದಕ್ಕಾಗಿ ಪ್ರಬಲ ಜನಾದೇಶವನ್ನು ಪಡೆಯುವ ಉದ್ದೇಶದಿಂದ ಮಧ್ಯಾಂತರ ಚುನಾವಣೆಯನ್ನು ನಡೆಸುವ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ನಿರ್ಧಾರ ತಿರುಗುಬಾಣವಾಗಿದೆ.

ಗುರುವಾರ ನಡೆದ ಸಂಸದೀಯ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ತೆರೇಸಾ ಮೇ ಅವರ ಕನ್ಸರ್ವೇಟಿವ್ ಸರಕಾರ ತನ್ನ ಬಹುಮತವನ್ನು ಕಳೆದುಕೊಂಡಿದೆ.

ಚುನಾವಣೆಯಲ್ಲಿ ಯಾರೂ ಸ್ಪಷ್ಟ ವಿಜಯ ಗಳಿಸಿಲ್ಲವಾದುದರಿಂದ ಮೇ ಅಧಿಕಾರದಿಂದ ಕೆಳಗಿಳಿಯಬೇಕು ಎಂಬುದಾಗಿ ಪಕ್ಷದಲ್ಲಿರುವ ಅವರ ಸಹೋದ್ಯೋಗಿಗಳೇ ಒತ್ತಾಯಿಸಿದ್ದಾರೆ.

 ಹೌಸ್ ಆಫ್ ಕಾಮನ್ಸ್‌ನಲ್ಲಿ 650 ಸ್ಥಾನಗಳ ಪೈಕಿ 649ರ ಫಲಿತಾಂಶ ಘೋಷಣೆಯಾಗಿದ್ದು, ಕನ್ಸರ್ವೇಟಿವ್ ಪಕ್ಷ 318 ಮತ್ತು ಲೇಬರ್ ಪಕ್ಷ 261 ಸ್ಥಾನಗಳನ್ನು ಗಳಿಸಿದೆ. ಸ್ಕಾಟಿಶ್ ನ್ಯಾಶನಲ್ ಪಾರ್ಟಿ 34 ಸ್ಥಾನಗಳನ್ನು ಗಳಿಸಿದೆ.

ಸರಳ ಬಹುಮತಕ್ಕೆ 326 ಸ್ಥಾನಗಳ ಅಗತ್ಯವಿದೆ.

 ಅತಂತ್ರ ಸಂಸತ್ತು ರೂಪುಗೊಳ್ಳುತ್ತದೆ ಎಂಬುದಾಗಿ ಗುರುವಾರ ರಾತ್ರಿ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಳ್ಳುತ್ತಿದ್ದಂತೆಯೇ, ಪೌಂಡ್‌ನ ದರದಲ್ಲಿ ಇಳಿಕೆ ದಾಖಲಾಯಿತು.

ಒಟ್ಟು ಸ್ಥಾನಗಳು: 650

ಘೋಷಿತ ಸ್ಥಾನಗಳು: 649

ಕನ್ಸರ್ವೇಟಿವ್ ಪಕ್ಷ: 318

ಲೇಬರ್ ಪಕ್ಷ: 261

ಸ್ಕಾಟಿಶ್ ನ್ಯಾಶನಲ್ ಪಾರ್ಟಿ: 34

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News