×
Ad

ಬಾವಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Update: 2017-06-09 20:55 IST

ಪುತ್ತೂರು, ಜೂ.9: ಪುತ್ತೂರು ನಗರದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಹಿಂಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದು ಇರುವ ನಿವೇಶನದಲ್ಲಿರುವ ಬಾವಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಹಿಂಬದಿಯಲ್ಲಿನ ನಿವೇಶನವೊಂದರಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಮನೆಯ ಪಕ್ಕದಲ್ಲೇ ರಿಂಗ್ ಅಳವಡಿಸಿದ ಆವರಣಗೋಡೆ ಇರುವ ಬಾವಿಯೊಂದಿದೆ. ಮನೆ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಶುಕ್ರವಾರ ಬಾವಿಯಿಂದ ನೀರು ತೆಗೆಯಲು ಹೋದ ವೇಳೆ ಬಾವಿಯೊಳಗೆ ಮೃತದೇಹ ಪತ್ತೆಯಾಗಿದೆ.

ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬಾವಿಯೊಳಗಿದ್ದ ಶವವನ್ನು ಮೇಲಕ್ಕೆತ್ತಿದ್ದಾರೆ. ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದ ವ್ಯಕ್ತಿಗೆ ಸುಮಾರು 40 ವರ್ಷ ಎಂದು ಅಂದಾಜಿಸಲಾಗಿದೆ.

ಮೃತದೇಹ ಪತ್ತೆಯಾದ ಬಾವಿಗೆ ಮೂರು ರಿಂಗ್ ಅಳವಡಿಸಿದ ಆವರಣಗೋಡೆಯಿದ್ದು, ಆಕಸ್ಮಿಕವಾಗಿ ಜಾರಿ ಬೀಳುವ ಸಾಧ್ಯತೆಯೇ ಇಲ್ಲ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೇ ಅಧಿಕವಾಗಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅನಂತಶಂಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಯ ಕುರಿತು ಸಾಮೆತ್ತಡ್ಕದ ಪಾಲನ್ ರಸ್ತೆ ನಿವಾಸಿ ಪ್ರವೀಣ್‌ಕುಮಾರ್ ರೈ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News