ಪಾಕಿಸ್ತಾನ ಪ್ರಧಾನಿಯ ಆರೋಗ್ಯ ವಿಚಾರಿಸಿ, ಕುಲಭೂಷಣ್ ಬಗ್ಗೆ ಪ್ರಶ್ನಿಸದ ಮೋದಿ: ಕಾಂಗ್ರೆಸ್ ಟೀಕೆ
Update: 2017-06-09 21:30 IST
ಹೊಸದಿಲ್ಲಿ, ಜೂ.9: ಪಾಕ್ ಪ್ರಧಾನಿ ನವಾಝ್ ಶರೀಫ್ ರನ್ನು ಭೇಟಿಯಾದ ಪ್ರಧಾನಿ ಕುಲಭೂಷಣ್ ಯಾದವ್ ಪ್ರಕರಣ ಹಾಗೂ ಗಡಿಪ್ರದೇಶಗಳಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯ ಬಗ್ಗೆ ಮಾತೆತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಭಾರತೀಯ ಸೈನಿಕರನ್ನು ಕೊಂದಿದ್ದಕ್ಕಾಗಿ ಯೋಗ್ಯ ಪ್ರತ್ಯುತ್ತರ ನೀಡದ ಮೋದಿ, ಪಾಕಿಸ್ತಾನ ಪ್ರಧಾನಿಯ ಹಾಗೂ ಅವರ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
“ನವಾಝ್ ಶರೀಫ್ ಹಾಗೂ ಅವರ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದ ಮೋದಿ ಕುಲಭೂಷಣ್ ಯಾದವ್ ರ ಬಗ್ಗೆ ಮಾತನಾಡಿದ್ದಾರೆಯೇ ಎಂದು ನಾನು ಪ್ರಶ್ನಿಸಲು ಇಚ್ಛಿಸುತ್ತೇನೆ. ದಿನಂಪ್ರತಿಯೆಂಬಂತೆ ಭಾರತದ ಸೈನಿಕರನ್ನು ಕೊಲ್ಲಲಾಗುತ್ತಿದೆ. ಆದರೆ ಇದುವರೆಗೂ ಪಾಕಿಸ್ತಾನಿ ಪ್ರಧಾನಿ ಮಂತ್ರಿಗೆ ಸೂಕ್ತ ಉತ್ತರ ನೀಡಲು ಮೋದಿಗೆ ಸಾಧ್ಯವಾಗಿಲ್ಲ” ಎಂದವರು ಟೀಕಿಸಿದ್ದಾರೆ.