×
Ad

ಕಾಸರಗೋಡು: ಭೂರಹಿತರಿಗೆ ಭೂಮಿ ವಿತರಿಸಲು ಜಿಲ್ಲಾ ಹಕ್ಕು ಪತ್ರ ಮೇಳ- ಇ. ಚಂದ್ರಶೇಖರನ್

Update: 2017-06-09 21:46 IST

ಕಾಸರಗೋಡು, ಜೂ.9: ಜಿಲ್ಲೆಯಲ್ಲಿ ಭೂರಹಿತ ಎಲ್ಲರಿಗೂ ಭೂಮಿ ವಿತರಿಸಲು ಈ ವರ್ಷ  ಮತ್ತೆ  ಜಿಲ್ಲಾ ಹಕ್ಕು ಪತ್ರ  ಮೇಳ ಆಯೋಜಿಸಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಕಂದಾಯ ಅಧಿಕಾರಿಗಳ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು.

ಅರ್ಹ ಭೂ ರಹಿತರನ್ನು  ಗುರುತಿಸಲು  ಗ್ರಾಮ ಮಟ್ಟದಲ್ಲಿ ಅದಾಲತ್ ನಡೆಸಲಾಗುವುದು.  ಸ್ವಂತ ಸ್ಥಳವಿಲ್ಲದೆ  ವಸತಿಗೃಹ ಮತ್ತು ಇತರ ಕಡೆ ವಾಸಿಸುವವರಿಗೆ ಭೂಮಿ ಖಾತರಿಪಡಿಸಬೇಕಿದೆ.

ಕಳೆದ ಹಕ್ಕು ಪತ್ರ  ಮೇಳಕ್ಕೆ ಲಭಿಸಿರುವ  7,000 ಅರ್ಜಿಗಳಲ್ಲಿ 2,247 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಳಿದವುಗಳ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ  ಭೂ ಅತಿಕ್ರಮಕ್ಕೆ  ಅವಕಾಶ ನೀಡುವುದಿಲ್ಲ. ಭೂ ಅತಿಕ್ರಮಣ ಉಂಟಾದಲ್ಲಿ ಗ್ರಾಮಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. 1977 ರ ಜನವರಿ ಒಂದರ ಹಿಂದೆ  ಅರಣ್ಯ ಭೂಮಿಯಲ್ಲಿ ವಾಸಿಸುವವರಿಗೆ ಪತ್ರ ನೀಡಲಾಗುವುದು. ಭೂರಹಿತರು ನೀಡುವ ಅರ್ಜಿಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸಬಾರದು. ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ  ಈ ಅರ್ಜಿಗಳ ಪರಿಶೀಲನೆ ನಡೆಸಬೇಕು  ಎಂದು ಸಚಿವರು ಹೇಳಿದರು.

ಭೂ ಅತಿಕ್ರಮಣ ತಡೆಗೆ ಅಗತ್ಯ ಪೊಲೀಸ್  ಸಂರಕ್ಷಣೆ ನೀಡಲಾಗುವುದು.  ಜಿಲ್ಲೆಯಲ್ಲಿನ ಎಲ್ಲಾ ಪರಿಶಿಷ್ಟರಿಗೆ ಭೂಮಿ ಖಾತರಿಪಡಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ. ಜೀವನ್ ಬಾಬು , ಕಂದಾಯ ಅಧಿಕಾರಿ  ಡಾ.ಪಿ.ಕೆ ಜಯಶ್ರೀ, ಹೆಚ್ಚುವರಿ ದಂಡಾಧಿಕಾರಿ ಕೆ . ಅಂಬುಜಾಕ್ಷನ್, ಉಪ ಜಿಲ್ಲಾಧಿಕಾರಿ ಎನ್. ದಿನೇಶನ್  ಹಾಗೂ  ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News