ಮೊವಾಡಿ ಚಲೋ ಸಂಘಟಕರಿಗೆ ಮುಚ್ಚಳಿಕೆ ಬರೆದುಕೊಡಲು ನೋಟೀಸು
ಕುಂದಾಪುರ, ಜೂ.9: ಮೊವಾಡಿಯ ಕೊರಗ ಸಮುದಾಯದ ಮೇಲೆ ಸಂಘ ಪರಿವಾರದ ಬೆಂಬಲಿಗರು ನಡೆಸಿದ ದೌರ್ಜನ್ಯವನ್ನು ಖಂಡಿಸಿ, ತಮ್ಮ ಆಹಾರ-ಭೂಮಿಯ ಹಕ್ಕನ್ನು ಪ್ರತಿಪಾದಿಸಿ ಜೂ.12ರಂದು ನಡೆಸಲು ನಿರ್ಧರಿಸಿರುವ ‘ಮೊವಾಡಿ ಚಲೋ’ ಹೋರಾಟದ ಸಂಘಟಕರಿಗೆ ಮುಚ್ಚಳಿಕೆ ಬರೆದುಕೊಡುವಂತೆ ಕುಂದಾಪುರ ತಹಶೀಲ್ದಾರರು ನೋಟೀಸು ಜಾರಿ ಮಾಡಿದ್ದಾರೆ.
ದಲಿತ ಸಂಘಟನೆಗಳ ಒಕ್ಕೂಟ ಉಡುಪಿ, ದಲಿತ ದಮನಿತರ ಹೋರಾಟ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಜೂ.12ರ ಮೊವಾಡಿ ಚಲೋಗೆ ಕರೆ ನೀಡಿವೆ. ಈ ರ್ಯಾಲಿಯಲ್ಲಿ ಹಾಗೂ ಬಹಿರಂಗ ಸಭೆಯಲ್ಲಿ ಪ್ರಚೋದನಾತ್ಮಕ ಭಾಷಣ ಮಾಡುವ ಸಾಧ್ಯತೆ ಇರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ರಮಝಾನ್ ಆಚರಣೆ ಮತ್ತು ವಿಧಾನಸಭಾ ಚುನಾವಣೆಗೆ ಇದರಿಂದ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕಲಂ108 ಸಿಆರ್‌ಪಿಸಿಯಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಳಿಕೆ ಬರೆದುಕೊಡುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.
ಉಡುಪಿಯ ವಿಠಲ ತೊಟ್ಟಂ, ಕುಂದಾಪುರ ತಲ್ಲೂರಿನ ಉದಯಕುಮಾರ್ ತಲ್ಲೂರು, ಹೂಡೆಯ ಹುಸೇನ್ ಕೋಡಿಬೇಂಗ್ರೆ, ಮಚ್ಚಟ್ಟು ಗ್ರಾಮದ ಅನಂತ ಮಚ್ಚಟ್ಟು, ಕುಂದಾಪುರದ ಕೆ.ಎಸ್.ವಿಜಯ, ಮಣೂರಿನ ಶ್ಯಾಮಸುಂದರ್ ತೆಕ್ಕಟ್ಟೆ ಹಾಗೂ ಬ್ರಹ್ಮಾವರ ವಾರಂಬಳ್ಳಿಯ ಶ್ಯಾಮ್‌ರಾಜ್ ಬಿರ್ತಿ ಇವರಿಗೆ ಜೂ.9ರಂದು ಅಪರಾಹ್ನ ಮೂರು ಗಂಟೆಗೆ ಈ ಕಚೇರಿಗೆ ಹಾಜರಾಗಿ ಸೂಕ್ತ ಮುಚ್ಚಳಿಕೆಯನ್ನು ನೀಡುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.
ಇವರಲ್ಲಿ ಒಂದಿಬ್ಬರು ಮಾತ್ರ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂಘ ಪರಿವಾರ ಆಯೋಜಿಸುವ ಬಹುತೇಕ ಸಮಾವೇಶ ಗಳಲ್ಲಿ ಪ್ರಚೋದನಾತ್ಮಕ ಮಾತನಾಡಿ ಕೋಮುಗಲಭೆಗೆ ಪ್ರೇರಣೆಯಾದ ಸಂದರ್ಭದಲ್ಲೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕೊಳ್ಳದೇ ಇಲಾಖೆ, ಹಿಂಸೆಯನ್ನು ಖಂಡಿಸಿ ನಡೆಸುವ ನ್ಯಾಯಬದ್ಧ ಹಾಗೂ ಶಾಂತಿಯುತ ಹೋರಾಟಕ್ಕೆ ಮೊದಲೇ ಮುಚ್ಚಳಿಕೆ ಬರೆಸಿಕೊಳ್ಳುವ ಕ್ರಮಕ್ಕೆ ದಲಿತ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ.