ಆರೋಪಿಯ ಜಾಮೀನು ರದ್ದು ಕೋರಿ ಪೊಲೀಸರಿಂದ ಕೋರ್ಟ್‌ಗೆ ಅರ್ಜಿ
Update: 2017-06-09 22:22 IST
ಮಂಗಳೂರು, ಜೂ. 9: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಕೊಲೆ ಪ್ರಕರಣದ ಆರೋಪಿ ಪಂಜಿಮೊಗರು ಉರುಂದಾಡಿಗುಡ್ಡೆ ನಿವಾಸಿ ಶಿವು ಅಲಿಯಾಸ್ ಶಿವಪ್ರಸಾದ್ ಎಂಬಾತನ ಜಾಮೀನು ರದ್ದು ಕೋರಿ ನಗರ ಪೊಲೀಸರು ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.
ಆರೋಪಿ ಶಿವಪ್ರಸಾದ್ 2006ರಲ್ಲಿ ಬಿಜೈಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಆತನಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿ, ಇನ್ಯಾವುದೇ ಕುಕೃತ್ಯದಲ್ಲಿ ಭಾಗಿಯಾದರೆ ಜಾಮೀನು ರದ್ದು ಮಾಡುವುದಾಗಿ ಹೇಳಿತ್ತು. ಆದರೆ ಆರೋಪಿ 2016 ಮಾ. 21ರಂದು ನಡೆದ ಬಾಳಿಗಾ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದು, ಎ.11ರಂದು ಬಂಧಿಸಿ, ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ. ಇದೀಗ ಪೊಲೀಸರು ಆತನ ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ.